ಪುನೀತ್ ಕೆರೆಹಳ್ಳಿ ವಿರುದ್ಧದ ಗೂಂಡಾ ಕಾಯ್ದೆ ರದ್ದು, ಜೈಲಿನಿಂದ ಬಿಡುಗಡೆ: ರಾಜ್ಯ ಸರಕಾರದ ನಡೆಗೆ ವ್ಯಾಪಕ ಅಸಮಾಧಾನ

Update: 2023-09-18 08:49 GMT

ಬೆಂಗಳೂರು: ಗೂಂಡಾ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ʼರಾಷ್ಟ್ರ ರಕ್ಷಣಾ ಪಡೆʼಯ ಅಧ್ಯಕ್ಷ‌, ಮಂಡ್ಯದ ಇದ್ರೀಸ್ ಪಾಷಾ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಿಸಲಾಗಿದ್ದ ಗೂಂಡಾ ಕಾಯ್ದೆಯನ್ನು ರದ್ದುಪಡಿಸಿ, ಜೈಲಿನಿಂದ ಬಿಡುಗಡೆ ಮಾಡುವಂತೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿರುವ ಸರಕಾರದ ನಡೆಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. 

ʼʼಆತನನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲʼʼ ಎಂದು ಕರ್ನಾಟಕ ಸರಕಾರದ ಸಲಹಾ ಮಂಡಳಿ ನ್ಯಾಯಾಲಯಕ್ಕೆ ನೀಡಿದ ವರದಿ ಆಶ್ಚರ್ಯಕರವಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈತನ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಎರಡು, ಡಿಜೆ ಹಳ್ಳಿ, ಕಗ್ಗಲೀಪುರ, ಹಂಪಿ, ಮಳವಳ್ಳಿ, ಹಲಸೂರು, ಚಾಮರಾಜಪೇಟೆ, ಎಲೆಕ್ಟ್ರಾನ್ ಸಿಟಿ, ಸಾತನೂರು ಪೊಲೀಸ್ ಠಾಣೆಗಳಲ್ಲಿ ಒಂದೊಂದು ಪ್ರಕರಣ ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಶಿಕ್ಷೆಯೂ ಆಗಿತ್ತು. ರಾಮನಗರ ಜಿಲ್ಲೆಯ ಸಾತನೂರು ಬಳಿ ನಡೆದಿದ್ದ ಇದ್ರೀಸ್ ಪಾಷಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

ಅಪರಾಧ ಪ್ರಕರಣಗಳಲ್ಲಿ‌ ಪದೇ ಪದೇ ಭಾಗಿಯಾಗುತ್ತಿರುವುದರಿಂದ ಪುನೀತ್‌ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಸಲಹಾ ಸಮಿತಿ ವರದಿಯನ್ವಯ ಆದೇಶ ಹೊರಡಿಸಿದ ಸರ್ಕಾರ

ಗೂಂಡಾ ಕಾಯ್ದೆಯಡಿ‌ ತನ್ನನ್ನು ಬಂಧಿಸಿರುವುದು ಅಕ್ರಮವೆಂದು ಆರೋಪಿಸಿ ಪುನೀತ್‌ ಕೆರೆಹಳ್ಳಿ ಹೈಕೋರ್ಟ್‌ ಮೊರೆ ಹೋಗಿದ್ದ. ಇದರ ವಿಚಾರಣೆಗಾಗಿ ಸರ್ಕಾರವು ಸಲಹಾ ಸಮಿತಿ ರಚಿಸಿತ್ತು. ವಿಚಾರಣೆ ನಡೆಸಿದ್ದ ಸಮಿತಿ, 'ಬಂಧಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ' ಎಂದು ಅಭಿಪ್ರಾಯಪಟ್ಟು ವರದಿ ನೀಡಿತ್ತು. ವರದಿಯನ್ವಯ ಆದೇಶ ಹೊರಡಿಸಿರುವ ಸರ್ಕಾರ, ಕಮಿಷನರ್ ಆದೇಶವನ್ನು ರದ್ದುಪಡಿಸಿ, ಪುನೀತ್ ಬಂಧನಮುಕ್ತಗೊಳಿಸುವಂತೆ ಸೂಚಿಸಿದೆ.

ಸರ್ಕಾರದ ಆದೇಶ ಪ್ರತಿ

- ಕಾಂಗ್ರೆಸ್ ಸರಕಾರದ ವಿರುದ್ಧ ಅಸಮಾಧಾನ 

ಕಾಂಗ್ರೆಸ್ ಸರಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಡಿವೈಎಫ್‌ ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, ʼʼಪುನೀತ್ ಕೆರೆಹಳ್ಳಿ ಬಿಡುಗಡೆ ಪ್ರಕರಣ ರಾಜ್ಯ ಕಾಂಗ್ರೆಸ್ ಸರಕಾರದ ಜಾತ್ಯಾತೀತತೆ ನಿಲುವಿನ ಮೇಲಿನ ಬದ್ದತೆಯನ್ನು ಪ್ರಶ್ನಾರ್ಹಗೊಳಿಸಿದೆ. ಸರಕಾರದ, ಮುಖ್ಯಮಂತ್ರಿಗಳ ಸಲಹಾ ಮಂಡಳಿ, ಸರಕಾರದ ಪ್ರಧಾನ ಅಧಿಕಾರಿಗಳು ಕೋಮುವಾದಿಗಳ ಹಿಡಿತದಲ್ಲಿ ಇದ್ದಂತಿದೆ. ಇದ್ರೀಸ್ ಪಾಷಾ, ಫಾಝಿಲ್ ಕೊಲೆ ಪ್ರಕರಣಗಳ ಮುಂದುವರಿದ ತನಿಖೆ ನಡೆಸುವ ಬದಲಿಗೆ ಕೋಮುವಾದಿ ಅಪರಾಧಿಗಳಿಗೆ ಜಾಮೀನು ಕೊಡಿಸಲು ಸರಕಾರ ಹೆಚ್ಚು ಆಸಕ್ತವಾಗಿರುವಂತಿದೆ. ಚೈತ್ರ ಕುಂದಾಪುರ ಪ್ರಕರಣವನ್ನೂ ಆಳ ತನಿಖೆಗೆ ಸರಕಾರ ಮನಸ್ಸು ಮಾಡುವುದು ಅನುಮಾನಾಸ್ಪದʼʼ ಎಂದು ಬರೆದುಕೊಂಡಿದ್ದಾರೆ. 

 

ʼʼಪುನೀತ್ ಕೆರೇಹಳ್ಳಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲʼʼ ಎಂದು ಕರ್ನಾಟಕ ಸರಕಾರದ ಸಲಹಾ ಮಂಡಳಿ ನ್ಯಾಯಾಲಯಕ್ಕೆ ನೀಡಿದ ವರದಿ ಆಶ್ಚರ್ಯಕರವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್‌ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ʼʼಹಲವಾರು ಸಮಾಜ ಘಾತುಕ ಕೊಲೆ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿ ಸರಕಾರಕ್ಕೆ ಅಲ್ಪಸಂಖ್ಯಾತರಿಗೆ ಬಹರಂಗ ಸವಾಲು ನೀಡಿದಂತಹಾ ಓರ್ವ ಆರೋಪಿಯ ರಕ್ಷಣೆಗೆ ಸರಕಾರವೇ ಇಳಿದಿರುವುದು ಅಕ್ಷಮ್ಯ. ಈತನ ಮೇಲೆ ವಿವಿಧ ಠಾಣೆಗಳಲ್ಲಿ ಎಂಟ್ಹತ್ತು ಪ್ರಕರಣಗಳಿದ್ದು ಇತ್ತೀಚೆಗೆ ಮಂಡ್ಯದ ಇದ್ರೀಸ್ ಪಾಷಾ ಹತ್ಯೆಯ ಆರೋಪವೂ ಇದ್ದು ಈತನ ಬಿಡುಗಡೆಗೆ ಸರಕಾರದ ಸಲಹಾ ಮಂಡಳಿ ಸಹಕರಿಸಿರುವುದು ಅನ್ಯಾಯದ ನಡೆಯಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಮತ್ತು ತನ್ನ ಸರಕಾರ ರಚನೆಯ ನಂತರ ದಿನವೂ ಅಲ್ಪ ಸಂಖ್ಯಾತರಿಗೆ ರಕ್ಷಣೆ ಮತ್ತು ಕೋಮುವಾದಿಗಳಿಗೆ ಸಮಾಜದಲ್ಲಿ ದ್ವೇಶ ಹರಡುವಂತಹವರಿಗೆ ಕಠಿಣ ಶಿಕ್ಷೆ ಕೊಡುವಂತಹಾ ಭಾಷಣಗಳನ್ನು ಪತ್ರಿಕಾ ಹೇಳಿಕೆಗಳನ್ನು ನಿರಂತರ ಹೇಳುತ್ತಾ ಬರುತ್ತಿರುವಾಗ ಸರಕಾರದ ಈ ನಡೆ ಅದಕ್ಕೆ ತದ್ವಿರುದ್ದವಾಗಿದೆ. ಆದ್ದರಿಂದ ಕಾಂಗ್ರೆಸ್ ಸರಕಾರದ ಬಾಷಣ ಪತ್ರಿಕಾ ಹೇಳಿಕೆಗಳು ಕೇವಲ ಕಾಗದಗಳಿಗೆ ಸೀಮಿತವಾಗದೆ ಸರಿಯಾದ ರೀತಿಯಲ್ಲಿ ಅನುಷ್ಟಾನಕ್ಕೆ ಬರಬೇಕಾಗಿದೆʼʼ ಅವರು ತಾಹೀರ್ ಹುಸೇನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News