ಗೂಂಡಾ ಕಾಯ್ದೆ ರದ್ದು: ಪುನೀತ್ ಕೆರೆಹಳ್ಳಿ‌ ಜೈಲಿನಿಂದ ಬಿಡುಗಡೆ

Update: 2023-09-17 09:25 GMT
  •  ಪುನೀತ್ ಕೆರೆಹಳ್ಳಿ

ಬೆಂಗಳೂರು: ಗೂಂಡಾ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ʼರಾಷ್ಟ್ರ ರಕ್ಷಣಾ ಪಡೆʼಯ ಅಧ್ಯಕ್ಷ‌ ಪುನೀತ್ ಕೆರೆಹಳ್ಳಿಯನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೆರೆಹಳ್ಳಿಯ ಪುನೀತ್, ಮಂಡ್ಯದ ಇದ್ರೀಸ್ ಪಾಷಾ ಕೊಲೆ ಆರೋಪಿಯಾಗಿದ್ದಾನೆ. 

ಸದ್ಯ ಬೆಂಗಳೂರು ನಗರದ ಜೆ.ಪಿ.ನಗರ 7ನೇ ಹಂತದಲ್ಲಿ ವಾಸವಿದ್ದ ಈತನ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಎರಡು, ಡಿಜೆ ಹಳ್ಳಿ, ಕಗ್ಗಲೀಪುರ, ಹಂಪಿ, ಮಳವಳ್ಳಿ, ಹಲಸೂರು, ಚಾಮರಾಜಪೇಟೆ, ಎಲೆಕ್ಟ್ರಾನ್ ಸಿಟಿ, ಸಾತನೂರು ಪೊಲೀಸ್ ಠಾಣೆಗಳಲ್ಲಿ ಒಂದೊಂದು ಪ್ರಕರಣ ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಶಿಕ್ಷೆಯೂ ಆಗಿತ್ತು. ಅಪರಾಧ ಪ್ರಕರಣಗಳಲ್ಲಿ‌ ಪದೇ ಪದೇ ಭಾಗಿಯಾಗುತ್ತಿರುವುದರಿಂದ ಪುನೀತ್‌ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಪುನೀತ್ ಬಂಧಿಸುವಂತೆ ಕಮಿಷನರ್ ಆದೇಶ ಹೊರಡಿಸಿದ್ದರು. ಆಗಸ್ಟ್‌ 11 ರಂದು ರಾತ್ರಿ ಪುನೀತ್ ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

ತನ್ನನ್ನು ಬಂಧಿಸಿರುವುದು ಅಕ್ರಮವೆಂದು ಆರೋಪಿಸಿ ಪುನೀತ್‌ ಕೆರೆಹಳ್ಳಿ ಹೈಕೋರ್ಟ್‌ ಮೊರೆ ಹೋಗಿದ್ದ. ಇದರ ವಿಚಾರಣೆಗಾಗಿ ಸರ್ಕಾರವು ಸಲಹಾ ಸಮಿತಿ ರಚಿಸಿತ್ತು. ವಿಚಾರಣೆ ನಡೆಸಿದ್ದ ಸಮಿತಿ, 'ಬಂಧಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ' ಎಂದು ಅಭಿಪ್ರಾಯಪಟ್ಟು ವರದಿ ನೀಡಿದೆ. ವರದಿಯನ್ವಯ ಆದೇಶ ಹೊರಡಿಸಿರುವ ಸರ್ಕಾರ, ಕಮಿಷನರ್ ಆದೇಶವನ್ನು ರದ್ದುಪಡಿಸಿ, ಪುನೀತ್ ಬಂಧನಮುಕ್ತಗೊಳಿಸುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಪುನೀತ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News