ಹೊರಗುತ್ತಿಗೆ ಆಧಾರದ ನೇಮಕಾತಿಯಲ್ಲಿ ಮೀಸಲಾತಿ: ಸಚಿವ ಸಂಪುಟ ನಿರ್ಧಾರ
ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅವಶ್ಯಕವಿರುವ 449 ಹುದ್ದೆಗಳ ಸೇವೆಯನ್ನು ಹೊರಗುತ್ತಿಗೆ ಆಧಾರದಲ್ಲಿ ಪಡೆಯಲು ಆಡಳಿತಾತ್ಮಕ ಅನುಮೋದನೆ ನೀಡಿರುವ ರಾಜ್ಯ ಸಚಿವ ಸಂಪುಟ ಸಭೆಯು, ಈ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಪಾಲನೆ ಮಾಡಲು ಇದೇ ಮೊದಲ ಬಾರಿಗೆ ಹೊರುಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಪದ್ಧತಿ ಅಳವಡಿಸಿಕೊಳ್ಳಲು ತೀರ್ಮಾನಿಸಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಈ ವಿಷಯವನ್ನು ತಿಳಿಸಿದರು.
ಕಾಲೇಜು ಶಿಕ್ಷಣ ಇಲಾಖೆ ಹಾಗೂ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅವಶ್ಯಕವಿರುವ 347 ಗ್ರೂಪ್-ಡಿ ನೌಕರರು ಮತ್ತು 102 ಡಾಟಾ ಎಂಟ್ರಿ ಆಪರೇಟರ್ ಗಳು ಸೇರಿದಂತೆ, ಒಟ್ಟು 449 ಹುದ್ದೆಗಳ ಸೇವೆಯನ್ನು ಅಂದಾಜು 11.30 ಕೋಟಿ ರೂ.ಗಳ ಮೊತ್ತದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಪಡೆಯಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜೊತೆಗೆ, ಈ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಪಾಲನೆ ಮಾಡಲು ರಾಜ್ಯದ ಮೀಸಲಾತಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಉಚಿತ ರೋಗ ಪತ್ತೆ ಮತ್ತು ಉಚಿತ ಔಷಧಿ ಸೇವೆಗಳ ಕಾರ್ಯಕ್ರಮದಡಿಯಲ್ಲಿ ವಿವಿಧ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿರುವ ಲ್ಯಾಬ್‍ಗಳಿಗೆ ಅಗತ್ಯವಿರುವ ರಾಸಾಯನಿಕಗಳು ಹಾಗೂ ಕಂಪ್ಯೂಟರ್ ರೇಡಿಯಾಗ್ರಫಿ ಸಿಸ್ಟಂಗಳಿಗೆ ಡ್ರೈ ಲೇಸರ್ ಎಕ್ಸ್ ರೇ ಫಿಲ್ಮ್ ಮತ್ತು ಪರಿಕರಗಳನ್ನು 50.15 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಬೆಂಗಳೂರು ನಗರ ಸಂಚಾರ ವಿಭಾಗ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ 136 ಸಂಚಾರಿ ಸಿಗ್ನಲ್ ವ್ಯವಸ್ಥೆಗಳನ್ನು ಉನ್ನತೀಕರಿಸಲು ಮತ್ತು ಅಡಾಪ್ಟಿವ್ ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೆ ಸಿಂಕ್ರೊನೈಸೇಶನ್ ಮಾಡಲು ಹಾಗೂ 29 ಸ್ಥಳಗಳಲ್ಲಿ ಹೊಸ ಅಡಾಪ್ಟಿವ್ ಸಂಚಾರ ವ್ಯವಸ್ಥೆ ನಿಯಂತ್ರಣಗಳನ್ನು ಅಳವಡಿಸಿ ಸಿಂಕ್ರೊನೈಸೇಶನ್ ಮಾಡಲು ಹಾಗೂ 165 ಅಡಾಪ್ಟಿವ್ ಸಂಚಾರ ವ್ಯವಸ್ಥೆ ನಿಯಂತ್ರಣ ಘಟಕಗಳನ್ನು 5 ವರ್ಷಗಳ ಅವಧಿಗೆ ನಿರ್ವಹಿಸುವ ಕಾಮಗಾರಿಗಳನ್ನು ಒಟ್ಟು 58.54 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
11 ಬುಡಕಟ್ಟು ಪಂಗಡಗಳಿಗೆ ಪೌಷ್ಠಿಕ ಆಹಾರ ಸರಬರಾಜಿಗೆ ಟೆಂಡರ್
ರಾಜ್ಯದ 8 ಜಿಲ್ಲೆಗಳಲ್ಲಿ ವಾಸಿಸುತ್ತಿರುವ 11 ಬುಡಕಟ್ಟು ಪಂಗಡಗಳಾದ ಕೊರಗ, ಜೇನುಕುರುಬ, ಸೋಲಿಗ, ಎರವ, ಕಾಡುಕುರುಬ, ಮಲೆಕುಡಿಯ, ಸಿದ್ದಿ, ಹಸಲರು, ಗೌಡಲು, ಗೊಂಡ ಮತ್ತು ಬೆಟ್ಟಕುರುಬ ಜನಾಂಗದ ಒಟ್ಟಾರೆ 47,859 ಕುಟುಂಬಗಳಿಗೆ 12 ತಿಂಗಳುಗಳಿಗೆ ಪೌಷ್ಠಿಕ ಆಹಾರವನ್ನು 120 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಉಚಿತವಾಗಿ ಸರಬರಾಜು ಮಾಡಲು ಟೆಂಡರ್ ಆಹ್ವಾನಿಸಿ ಖರೀದಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಮೈಸೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಬಾಕಿ ಕಾಮಗಾರಿಗೆ ಅವಶ್ಯವಿರುವ 19.10 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈ ಕಾಮಗಾರಿಯನ್ನು ಪ್ರಾಧಿಕಾರದ ವತಿಯಿಂದ ಟೆಂಡರ್ ಆಹ್ವಾನಿಸಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಕಾಮಗಾರಿಗಳಿಗೆ ಅನುಮೋದಿತ 36.98 ಕೋಟಿ ರೂ.ಮೊತ್ತದ ಆಸ್ತಿ ಮತ್ತು ಹೊಣೆಗಾರಿಕೆಯನ್ನು ರಾಜ್ಯ ನೀರಾವರಿ ನಿಗಮದಿಂದ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ವರ್ಗಾಯಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಯ 12 ಕೋಟಿ ರೂ.ಮೊತ್ತದ ಅಂದಾಜು ಪಟ್ಟಿಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬಿಬಿಎಂಪಿಯು ಕೇಂದ್ರ ಹಾಗೂ ರಾಜ್ಯ ಸರಕಾರದ ಆಸ್ತಿಗಳಿಂದ ಬಿಡಿಎ ಆಸ್ತಿಗಳು ಸೇರಿದಂತೆ ಬಾಕಿ ಇರುವ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ‘ಒಂದು ಬಾರಿ ಪರಿಹಾರ ಯೋಜನೆ’ಯ ಅವಧಿಯನ್ನು 2023-24ನೆ ಆರ್ಥಿಕ ವರ್ಷದ ಅಂತ್ಯದವರೆಗೆ(2024ರ ಜೂ.30) ವಿಸ್ತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಬೆಂಗಳೂರು ಏರ್ ಪೋರ್ಟ್ ಬಳಿ ಎರಡು ಇಂದಿರಾ ಕ್ಯಾಂಟೀನ್
ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ವಾಹನ ಚಾಲಕರು ಮತ್ತು ಕಾರ್ಮಿಕರು ಹಾಗೂ ಇತರೆ ಸಾರ್ವಜನಿಕರಿಗಾಗಿ ಎರಡು ಇಂದಿರಾ ಕ್ಯಾಂಟೀನ್‍ಗಳನ್ನು ನಿರ್ಮಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ರಾಜ್ಯ ನೀರಾವರಿ(ನೀರಿನ ಕರ ವಿಧಿಸುವಿಕೆ) ನಿಯಮಗಳು, 1965ಕ್ಕೆ ತಿದ್ದುಪಡಿ ಮಾಡಲು ಅಧಿಸೂಚನೆ ಹೊರಡಿಸಲು ನಿರ್ಧರಿಸಿದ್ದು, ಅದರಂತೆ, ಕಾಲುವೆ, ಕೆರೆ, ಜಲಾಶಯಗಳ ಮೂಲಕ ಒದಗಿಸುವ ನೀರಿಗೆ ಪ್ರತಿ ಎಂ.ಸಿ.ಎಫ್.ಟಿ.ಗೆ 3 ಲಕ್ಷ ರೂ.ರಾಜಧನ, ನೈಸರ್ಗಿಕ ಜಲಮಾರ್ಗಗಳು, ನದಿ, ಹಳ್ಳಗಳಿಂದ ಒದಗಿಸುವ ಪ್ರತಿ ಎಂ.ಸಿ.ಎಫ್.ಟಿಗೆ 1.50 ಲಕ್ಷ ರೂ.ರಾಜಧನ ನಿಗದಿಪಡಿಸಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಕೋವಿಡ್ ಕುರಿತು ಕೋವಿಡ್ ಮಾರಕ ರೋಗ ನಿಯಂತ್ರಣ ಕುರಿತು ಕಾಲಕಾಲಕ್ಕೆ ಕೈಗೊಂಡ ಕ್ರಮಗಳನ್ನು ಮೇಲುಸ್ತುವಾರಿ ಮಾಡಲು ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲು ಮುಖ್ಯಮಂತ್ರಿಗೆ ಅಧಿಕಾರ ನೀಡಲಾಯಿತು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 300 ಎಲೆಕ್ಟ್ರೀಕ್ ಬಸ್‍ಗಳನ್ನು (ಎ.ಸಿ-75, ನಾನ್ ಎ.ಸಿ-225) ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 450 ನಾನ್ ಎ.ಸಿ ಎಲೆಕ್ಟ್ರೀಕ್ ಬಸ್‍ಗಳನ್ನು ಜೆ.ಸಿ.ಸಿ ಆಧಾರದ ಮೇಲೆ ಕಾರ್ಯಾಚರಣೆಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ಕಾನೂನು ಮತ್ತು ನೀತಿ 2023ಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಈ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹ, ಅಧ್ಯಯನ ನಡೆಸಲು ಸಂಪುಟ ಉಪ ಸಮಿತಿ ರಚಿಸಲು ಮುಖ್ಯಮಂತ್ರಿಗೆ ಅಧಿಕಾರ ನೀಡಲಾಗಿದೆ. ರಾಜ್ಯ ಸಾಮಾನ್ಯ ಸೇವೆ(ಪಿಯು ಮಂಡಳಿ)(ನೇಮಕಾತಿ) ತಿದ್ದುಪಡಿ ನಿಯಮಗಳಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ನೆರವಿನ ಯೋಜನೆಯಡಿ ಮಂಗಳೂರು ನಗರದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ 24/7 ನೀರು ಸರಬರಾಜು ಕಾಮಗಾರಿಯಲ್ಲಿ ಹೊಸದಾಗಿ 125 ಎಂ.ಎಲ್.ಡಿ ನೀರು ಶುದ್ಧೀಕರಣ ಘಟಕವನ್ನು 127.70 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಎಚ್.ಕೆ.ಪಾಟೀಲ್, ಕಾನೂನು ಸಚಿವ