‘ಕಂಬಳ’ಕ್ಕೆ ಸರಕಾರದಿಂದ 1 ಕೋಟಿ ರೂ. ಸಹಾಯಧನ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-10-11 17:00 GMT

ಬೆಂಗಳೂರು, ಅ.11: ರಾಜ್ಯ ಸರಕಾರದ ವತಿಯಿಂದ 20 ಕಂಬಳಗಳಿಗೆ ತಲಾ 5 ಲಕ್ಷ ರೂ.ಗಳಂತೆ 1 ಕೋಟಿ ರೂಪಾಯಿ ಸಹಾಯಧನವನ್ನು ನೀಡಲಾಗುವುದು. ದೇಸಿ ಹಾಗೂ ಐತಿಹಾಸಿಕವಾದ ಕಂಬಳ ಕ್ರೀಡೆಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬುಧವಾರ ನಗರದ ಅರಮನೆ ಮೈದಾನದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಂಬಳ ಸಮಿತಿ, ಬೆಂಗಳೂರಿನಲ್ಲಿರುವ ತುಳು ಕೂಟ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸರ್ವ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬೆಂಗಳೂರು ಕಂಬಳ ಸಮಿತಿ ವತಿಯಿಂದ ಆಯೋಜಿಸಲಾಗಿರುವ ‘ಬೆಂಗಳೂರು ಕಂಬಳ-ನಮ್ಮ ಕಂಬಳ’ದ ಕರೆಪೂಜೆ (ಗುದ್ದಲಿ ಪೂಜೆ) ನೆರವೇರಿಸಿ ಅವರು ಮತನಾಡಿದರು.

ಕಂಬಳಕ್ಕೆ ಸಹಾಯಧನ ಬಿಡುಗಡೆ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜತೆ ಚರ್ಚೆ ನಡೆಸಲಾಗುವುದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮಾಜಗಳ ಸಂಘಟನೆಗೆ ಒಂದು ನೆಲೆ ಬೇಕು ಎಂದು ಶಾಸಕ ಅಶೋಕ್ ರೈ ಮನವಿ ಮಾಡಿದ್ದು, ಎಲ್ಲರೂ ಒಟ್ಟಾಗಿ ಸರಕಾರಕ್ಕೆ ಮನವಿ ಸಲ್ಲಿಸಿ ಎಂದು ಅವರು ಹೇಳಿದರು.

ಮನುಷ್ಯನ ಬಳಿ ತೆಗೆದುಕೊಂದು ಹೋಗಲು ಏನೂ ಇಲ್ಲ, ತನ್ನ ಬಳಿ ಇರುವುದನ್ನೆಲ್ಲಾ ಬಿಟ್ಟು ಹೋಗಲೇಬೇಕು. ಆದರೆ ನಮ್ಮ ಸಂಸ್ಕøತಿಯನ್ನು ಉಳಿಸಿ, ಪರಿಚಯಿಸಬೇಕು ಎಂದು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರು ಒಂದಾಗಿರುವುದು ಸಂತೋಷದ ವಿಚಾರ ಎಂದು ಶಿವಕುಮಾರ್ ತಿಳಿಸಿದರು.

ಉಳಿಪೆಟ್ಟು ಬೀಳದೆ ಯಾವುದೇ ಶಿಲೆ ಪ್ರತಿಮೆ ಆಗುವುದಿಲ್ಲ. ಭೂಮಿ ಉಳದೆ ಯಾವುದೇ ಬೆಳೆ ಬೆಳೆಯಲು ಆಗುವುದಿಲ್ಲ. ಅದರಂತೆ ಅರಮನೆ ಮೈದಾನದಲ್ಲಿ ಒಂದಷ್ಟು ಅಭಿವೃದ್ದಿ ಕೆಲಸಗಳನ್ನು ಈ ನೆಪದಲ್ಲಿ ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಂತಹ ಡಿ.ವಿ.ಸದಾನಂದ ಗೌಡರು, ಎನ್.ಎ.ಹಾರಿಸ್ ಬೆಂಗಳೂರಿನಲ್ಲಿ ನಾಯಕರಾಗಿ ಬೆಳೆದಿದ್ದಾರೆ ಎಂದು ಅವರು ಹೇಳಿದರು.

‘ಕರ್ನಾಟಕದ ಕರಾವಳಿ ಭಾಗ ಈ ದೇಶದ ದೊಡ್ಡ ಆಸ್ತಿ. ಉದ್ದಿಮೆ, ಶಿಕ್ಷಣ, ಹೋಟೆಲ್ ಉದ್ಯಮ, ಪ್ರವಾಸೋದÀ್ಯಮ, ಬ್ಯಾಂಕಿಂಗ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ತಮ್ಮ ಸಂಪ್ರದಾಯವನ್ನು ಬೆಂಗಳೂರಿನ ಜನತೆಗೂ ಪರಿಚಯಿಸಲು ಹೊರಟಿರುವ ಶಾಸಕ ಅಶೋಕ್ ರೈ ಕೆಲಸ ಶ್ಲಾಘನೀಯ ಎಂದು ಶಿವಕುಮಾರ್ ತಿಳಿಸಿದರು.

ಈ ದೇಶಕ್ಕೆ ದೊಡ್ಡ ಆಸ್ತಿಯೆ ನಮ್ಮ ಸಂಸ್ಕೃತಿ. ಅದೇ ರೀತಿ ದಕ್ಷಿಣ ಕನ್ನಡ ಶ್ರೀಮಂತ ಜನಪದ ಆಚರಣೆಗಳನ್ನು ಹೊಂದಿದೆ. ದಕ್ಷಿಣ ಕನ್ನಡದ ಆಚರಣೆ ಬೆಂಗಳೂರಿನಲ್ಲೂ ನಡೆಯಬೇಕು ಎನ್ನುವ ಸಾಕ್ಷಿಗುಡ್ಡೆಯನ್ನು ಬಿಟ್ಟು ಹೋಗಲು ಎಲ್ಲರೂ ಒಗ್ಗಟ್ಟಾಗಿ ಸೇರಿ ಮಾದರಿ ಕೆಲಸ ಮಾಡುತ್ತಿದ್ದೀರಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಯುವಕರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದು. ಸಾವಿರಾರು ಯುವಕರು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈ ಐತಿಹಾಸಿಕ ಕಂಬಳ ಆಯೋಜನೆ ಮಾಡುತ್ತಿರುವುದಕ್ಕೆ ನಮ್ಮ ಸಹಕಾರ ಎಂದಿಗೂ ಇರುತ್ತದೆ. ದೇವರು ವರ, ಶಾಪ ಎರಡೂ ನೀಡದೆ ಅವಕಾಶ ನೀಡುತ್ತಾನೆ, ಈ ಅವಕಾಶ ಬಳಸಿಕೊಳ್ಳಿ ಎಂದು ಶಿವಕುಮಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಶಾಸಕರಾದ ಎನ್.ಎ.ಹಾರಿಸ್, ಅಶೋಕ್ ಕುಮಾರ್ ರೈ, ಕಂಬಳ ಸಮಿತಿಯ ಗುರುಕಿರಣ್, ಪ್ರಕಾಶ್ ಶೆಟ್ಟಿ, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ನ ಮಾಜಿ ಅಧ್ಯಕ್ಷ ಉಮರ್ ಟೀಕೆ, ಗುಣರಂಜನ್ ಶೆಟ್ಟಿ, ಉಮೇಶ್ ಶೆಟ್ಟಿ, ಕಾಂತರಾಜ್ ಮತ್ತಿತರರು ಪಾಲ್ಗೊಂಡಿದ್ದರು.

‘ತುಳುಕೂಟಕ್ಕೆ 50 ವರ್ಷದ ಸಂಭ್ರಮ ಹಿನ್ನೆಲೆ ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡಲಾಗುತ್ತಿದ್ದು ನವೆಂಬರ್ 24, 25, 26ರಂದು ಕಂಬಳ ನಡೆಯಲಿದೆ. 1 ತಿಂಗಳ ಕಾಲ ಕಂಬಳಕ್ಕಾಗಿ ಟ್ರ್ಯಾಕ್ ಸಿದ್ದಪಡಿಸಲಾಗುತ್ತೆ. 125ರಿಂದ 150 ಜೊತೆ ಕೋಣಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಕರೆದುತಂದು ಕಂಬಳ ಏರ್ಪಡಿಸಲಾಗುತ್ತಿದೆ. ಈ ಕಂಬಳಕ್ಕೆ 8 ಲಕ್ಷ ಜನ ಸೇರುವ ನಿರೀಕ್ಷೆ ಇದೆ’ ಎಂದು ಆಯೋಜಕರು ತಿಳಿಸಿದ್ದಾರೆ.

 

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News