ಚವ್ಹಾಣ್ ವಿರುದ್ಧ 100 ಕೋಟಿ ರೂ.ಮಾನನಷ್ಟ ಮೊಕದ್ದಮೆ: ಸ್ವಪಕ್ಷದ ಶಾಸಕನಿಗೆ ಕೇಂದ್ರ ಸಚಿವ ಖೂಬಾ ಎಚ್ಚರಿಕೆ
ಹೊಸದಿಲ್ಲಿ, ಆ. 11: ‘ತನ್ನ ವಿರುದ್ಧ ಮಾಜಿ ಸಚಿವ ಪ್ರಭು ಚವ್ಹಾಣ್ ಆರೋಪ ಕಪಟದಿಂದ ಕೂಡಿದ್ದು, ಅವರ ವಿರುದ್ಧ ನೂರು ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತನ್ನ ವಿರುದ್ಧ ಪ್ರಭು ಚವ್ಹಾಣ್ ಹತ್ಯೆ ಸಂಚು ಆರೋಪ ಹೊರಿಸಿದ್ದರು. ಔರಾದ್ ಮಂಡಲದ ಕಾರ್ಯಕಾರಣಿಯಲ್ಲಿ ಮಾತನಾಡುವ ಎಲ್ಲ ಮಾತು ಬಿಟ್ಟು ನನ್ನ ಮೇಲೆ ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ. ಇದರಿಂದ ಆಘಾತನಾಗಿದ್ದೇನೆ. ಹೇಳಿಕೊಳ್ಳಲಾಗದಷ್ಡು ಮನಸ್ಸಿಗೆ ನೋವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಪಕ್ಷದ ಕಾರ್ಯಕರ್ತರು, ಹಿತೈಷಿಗಳು ನಿರಂತರವಾಗಿ ಸಂಪರ್ಕ ಮಾಡಿ ಧೈರ್ಯ ತುಂಬುತ್ತಿದ್ದಾರೆ. ಪ್ರಭು ಚವ್ಹಾಣ್ ಆರೋಪ ಮೋಸದಿಂದ ಕೂಡಿದೆ. 9 ವರ್ಷದ ಹಿಂದೆ ಇದೇ ರೀತಿ ಆರೋಪ ಮಾಡಿದ್ದರು. ನಮ್ಮ ಪಕ್ಷದಲ್ಲಿ ಈ ಎಲ್ಲ ಸಮಸ್ಯೆ ಬಗೆಹರಿಯುತ್ತವೆ. ತಪ್ಪು ತಿಳುವಳಿಕೆ ಸರಿಯಾಗಬಹುದು ಎಂದು ಭಾವಿಸಿದ್ದೆ. ಆದರೆ, ಇದರ ಹಿಂದೆ ತಂತ್ರ ಕುತಂತ್ರ ಅಡಗಿದೆ ಎಂದು ಟೀಕಿಸಿದರು.
‘ನಾನು ಪಕ್ಷದ ಸೇವೆ ನೋಡಿ ಮೋದಿ ಅವರು ಕೇಂದ್ರ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಿದ್ದಾರೆ. ಮಂತ್ರಿ ಮಾಡುವ ಮುನ್ನ ನನ್ನ ಚರಿತ್ರೆ ಗಮನ ಹರಿಸುತ್ತಾರೆ. ನಾನು ಜನ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಆದರೆ, ಈ ಆರೋಪ ಏಕೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಜಿಲ್ಲೆಯಲ್ಲಿ ಶಾಸಕರ ಸಂಖ್ಯೆಯನ್ನು ಒಂದರಿಂದ ನಾಲ್ಕಕ್ಕೆ ಹೆಚ್ಚಿಸಿದೆ. ಇಂತಹ ಸಮಯದಲ್ಲಿ ಚವ್ಹಾಣ್ ಎಲ್ಲರ ಜೊತೆಗೆ ಸಂಭ್ರಮ ಮಾಡಬೇಕಿತ್ತು. ಆದರೆ ದೋಷಣೆ ಮಾಡುತ್ತಿದ್ದಾರೆ ಎಂದು ದೂರಿದರು.
ಈಗಾಗಲೇ ನಮ್ಮ ಪಕ್ಷದ ನಾಯಕರು ಮಾಹಿತಿ ಪಡೆದುಕೊಂಡಿದ್ದಾರೆ. ನನ್ನ ಭಾವನೆ ಹೇಳಿಕೊಂಡಿದ್ದೇನೆ. ಪಕ್ಷದ ವೇದಿಕೆಯಲ್ಲಿ ಸತ್ಯಾಸತ್ಯತೆಯನ್ನು ವರಿಷ್ಠರ ಹೊರ ಹಾಕಲಿದ್ದಾರೆ. ನೂರು ಕೋಟಿ ರೂ.ಮಾನಹಾನಿ ಕೇಸ್ ಹಾಕಲು ನಿರ್ಧರಿಸಿದ್ದೇನೆ. ವರಿಷ್ಠರು ಅನುಮತಿ ನೀಡಿದರೆ ದೂರು ದಾಖಲಿಸುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದರು.