ಗ್ಯಾರಂಟಿ ಯೋಜನೆಗಳಿಗೆ 35,410ಕೋಟಿ ರೂ.ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಜು.21: ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿರುವ ಗ್ಯಾರಂಟಿ ಯೋಜನೆಗಳ ಕುರಿತು ಜನರು ಸಂತುಷ್ಟರಾಗಿದ್ದು, 35,410 ಕೋಟಿ ರೂ. ಅಗತ್ಯವಿದೆ. ಆಯವ್ಯಯದಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನ ಪರಿಷತ್‍ನಲ್ಲಿ ಆಯವ್ಯಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ಗ್ಯಾರಂಟಿ ಯೋಜನೆಗಳಿಗೆ 13,500ಕೋಟಿ ರೂ.ಹೆಚ್ಚುವರಿ ತೆರಿಗೆ ಸಂಗ್ರಹ ಗುರಿ, 8,068 ಕೋಟಿ ರೂ. ಹೆಚ್ಚುವರಿ ಸಾಲ, ಬಂಡವಾಳ ಯೋಜನೆಗಳ ಮರು ಆದ್ಯತೆ ನಿಗದಿ ಮೂಲಕ 6,086ಕೋಟಿ ರೂ.ಹಾಗೂ ರಾಜಸ್ವ ಯೋಜನೆಗಳ ಮರು ಆದ್ಯತೆ ನಿಗದಿ ಪಡಿಸುವ ಮೂಲಕ 7ಸಾವಿರ ಕೋಟಿ ರೂ. ಸೇರಿದಂತೆ ಒಟ್ಟು 34,654 ಕೋಟಿ ರೂ. ಸಂಪನ್ಮೂಲ ಕ್ರೋಢೀಕರಣ ಮಾಡಲಾಗುವುದು ಎಂದು ತಿಳಿಸಿದರು.
ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಜೇಬಿಗೆ ಹಣ ಹಾಕುವ ಈ ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಸಾರ್ವತ್ರಿಕ ಮೂಲ ಆದಾಯ ಕಾರ್ಯಕ್ರಮಗಳಿಂದ ಪ್ರೇರಿತವಾಗಿವೆ. ಶೇ.90ರಷ್ಟು ಜನರು ತೆರಿಗೆ ಪಾವತಿ ಮಾಡಿದರೆ, ಶೇ.10ರಷ್ಟು ಜನರು ತೆರಿಗೆಯ ಸೌಲಭ್ಯಗಳನ್ನು ಅನುಭವಿಸುತ್ತಾರೆ. ಆದರೆ ಸಂಪನ್ಮೂಲಗಳ ಮರುಹಂಚಿಕೆ ನ್ಯಾಯಯುತವಾಗಿ ಆಗಬೇಕು ಎಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದ ಆಯವ್ಯಯದ ಗಾತ್ರ 3,26,747 ಕೋಟಿ ರೂ.ಗಳಷ್ಟಿದ್ದು, 2022-23 ರ ಆಯವ್ಯಯ ಗಾತ್ರಕ್ಕಿಂತ ಶೇ.22ರಷ್ಟು ಹೆಚ್ಚಳವಾಗಿದೆ. ವಿತ್ತೀಯ ಕೊರತೆ ಶೇ.2.6 ರಷ್ಟಿದ್ದು, ಸಾಲದ ಪ್ರಮಾಣ ಜಿ.ಎಸ್.ಡಿ.ಪಿ.ಯ ಶೇ.22ರಷ್ಟಿದೆ. ಆದುದರಿಂದ ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ ವಿತ್ತೀಯ ಶಿಸ್ತನ್ನು ನಿರ್ಧರಿಸುವ ಎರಡು ಮಾನದಂಡಗಳನ್ನು ನಮ್ಮ ಸರಕಾರ ಪಾಲನೆ ಮಾಡಿದೆ. ಈ ಬಾರಿ ಗ್ಯಾರಂಟಿ ಯೋಜನೆಗಳ ಕಾರಣದಿಂದ 15,523 ಕೋಟಿ ರೂ. ಕೊರತೆ ಬಜೆಟ್ ಮಂಡಿಸಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಕೊರತೆ ಪ್ರಮಾಣ ಕಡಿಮೆಯಾಗಿದೆ. ಮುಂದಿನ ಬಾರಿ ಉಳಿತಾಯ ಬಜೆಟ್ ಮಂಡಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಶಕ್ತಿ ಯೋಜನೆಯಡಿ ಪ್ರತಿದಿನ ಸರಾಸರಿ 50 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಒಟ್ಟಾರೆ 23 ಕೋಟಿ ಪ್ರಯಾಣಿಕರಿಗೆ ಈ ಸೌಲಭ್ಯ ದೊರೆತಿದೆ. ಈ ಕುರಿತು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ 1.16 ಕೋಟಿ ಕುಟುಂಬಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಜು.1ರಿಂದಲೇ ಗೃಹ ಬಳಕೆಗೆ 200 ಯುನಿಟ್‍ವರೆಗೆ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದೆ ಎಂದು ಅವರು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರಕಾರದ ಅಕ್ಕಿ ರಾಜಕೀಯದಿಂದಾಗಿ ಹೆಚ್ಚುವರಿ ಆಹಾರಧಾನ್ಯ ನೀಡಲು ಸಾಧ್ಯವಾಗಿಲ್ಲ. ಬದಲಿಗೆ ಪ್ರತಿ ಫಲಾನುಭವಿಗೆ ತಲಾ 170 ರೂ.ನಂತೆ 4.42 ಕೋಟಿ ಫಲಾನುಭವಿಗಳಿಗೆ ನಗದು ವರ್ಗಾವಣೆ ಮಾಡಲು ಚಾಲನೆ ನೀಡಲಾಗಿದೆ. ಈವರೆಗೆ 57.51 ಕುಟುಂಬಗಳಿಗೆ 33,708 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಗೃಹ ಲಕ್ಷ್ಮಿ ಯೋಜನೆಗೆ ವಾರ್ಷಿಕ 32 ಸಾವಿರ ಕೋಟಿ ರೂ. ಅಗತ್ಯವಿದ್ದು, ಪ್ರಸಕ್ತ ಸಾಲಿನಲ್ಲಿ 18 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಯುವ ನಿಧಿ ಯೋಜನೆಯು ಡಿಸೆಂಬರ್ ತಿಂಗಳಿನಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ. ನಿರುದ್ಯೋಗಿ ಯುವಕರ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಹಿಂದಿನ ಸರಕಾರದ ಅವಧಿಯ ಬಿಟ್ ಕಾಯಿನ್ ಹಗರಣ, ಪಿಎಸ್‍ಐ ನೇಮಕಾತಿ ಹಗರಣ, ಕೋವಿಡ್ ಉಪಕರಣ-ಔಷಧ ಖರೀದಿ ಹಗರಣ ಮೊದಲಾದವುಗಳ ತನಿಖೆ ಈಗಾಗಲೇ ಪ್ರಾರಂಭವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಗ್ಯಾರಂಟಿಗಳಿಂದ 1.30ಕೋಟಿ ಕುಟುಂಬಗಳಿಗೆ ಅನುಕೂಲ: ‘ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಕೈಗೆ ದುಡ್ಡು ನೀಡಲು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸಂಪನ್ಮೂಲ ಕ್ರೋಢೀಕರಣ, ಯೋಜನೆಗಳಿಗೆ ಅನುದಾನ ಮೀಸಲು ಮಾಡಲಾಗಿದೆ. ರಾಜ್ಯದ ಆರ್ಥಿಕತೆ ದಿವಾಳಿಯಾಗುತ್ತಿಲ್ಲ. 76 ಕಾರ್ಯಕ್ರಮಗಳ ಅನುμÁ್ಠನ ಮಾಡುವ ಮೂಲಕ ನುಡಿದಂತೆ ನಡೆಯುತ್ತಿದ್ದೇವೆ. ಗ್ಯಾರಂಟಿಗಳಿಂದ 1.30 ಕೋಟಿ ಕುಟುಂಬಗಳಿಗೆ ಅನುಕೂಲವಾಗುತ್ತಿದೆ’
-ಸಿದ್ದರಾಮಯ್ಯ, ಮುಖ್ಯಮಂತ್ರಿ