ಆರೆಸ್ಸೆಸ್‍ನವರು ಸಾವಿರಾರು ಕನಸುಗಳನ್ನು ಕೊಂದು ಹಾಕಿದ್ದಾರೆ: ಪ್ರಕಾಶ್ ರಾಜ್

Update: 2024-03-09 15:10 GMT

ಬೆಂಗಳೂರು: ‘ರಾಷ್ಟ್ರೀಯ ಸ್ವಯ ಸೇವಕರ ಸಂಘ(ಆರೆಸ್ಸೆಸ್)ದವರು ಸಾವಿರಾರು ಕನಸುಗಳನ್ನು ಕೊಂದು ಹಾಕಿದರು. ರಾಜಕೀಯವೇ ಅವರಿಗೆ ಮುಖ್ಯವಾಗಿದ್ದು, ಶ್ರೀರಾಮನನ್ನೂ ಬಿಡದೆ ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ಇಲ್ಲಿನ ಗಾಂಧಿ ಭವನದಲ್ಲಿ ಲಡಾಯಿ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ನವೀನ್ ಸೂರಿಂಜೆ ರಚಿಸಿರುವ ‘ಮಹೇಂದ್ರ ಕುಮಾರ್- ನಡುಬಗ್ಗಿಸದ ಎದೆಯ ದನಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘ ಪರಿವಾರವನ್ನೇ ಮಹಾಪ್ರಭುಗಳ(ಮೋದಿ) ಪರಿವಾರ ಎಂದು ಬಿಂಬಿಸಲಾಗುತ್ತಿದ್ದು, ನಿಮ್ಮ ಸಂಘ ಪರಿವಾರದಲ್ಲಿ ಮಣಿಪುರದ ನೋವು ಕಾಣುತ್ತಿಲ್ಲ. ನಿಮ್ಮ ಪರಿವಾರದಲ್ಲಿ ರೈತರು, ಕಾರ್ಮಿಕರು, ದಲಿತರು, ಮಹಿಳೆಯರ ನೋವು ಆಲಿಸುವುದಿಲ್ಲ. ಹೀಗಾಗಿ ನಿಮ್ಮದು ನಮ್ಮ ಪರಿವಾರ ಅಲ್ಲ. ನಾವು ನಿಮ್ಮೊಂದಿಗೆ ಪರಸಂಘ ಮಾಡುವುದಿಲ್ಲ, ನಿಮ್ಮ ಪರಿವಾರದ ಜೊತೆ ನಾವಿಲ್ಲ. ಹೀಗಾಗಿ ನಾವು ಪ್ರಶ್ನಿಸುತ್ತಲೇ ಇರುತ್ತೇವೆ ಎಂದು ಅವರು ಹೇಳಿದರು.

ನಾನು ಯಾವ ಪಕ್ಷದವನಲ್ಲ, ಜನರ ಜೊತೆ ಇರುವದರಿಂದ ನಾನು ನಿರಂತರ ವಿರೋಧ ಪಕ್ಷ. ನನ್ನ ಆತ್ಮೀಯರು ಆಳುವ ಪಕ್ಷದಲ್ಲಿದ್ದರೂ, ನಾನು ವಿರೋಧ ಪಕ್ಷವಾಗಿಯೇ ಇರುತ್ತೇನೆ. ರಾಜಕಾರಣದಲ್ಲಿ ವಿರೋಧ ಪಕ್ಷ ಗೆಲ್ಲುವುದಿಲ್ಲ. ಆಳುವ ಪಕ್ಷ ಸೋಲುತ್ತದೆ. ಕರ್ನಾಟಕದಲ್ಲಿ ಅವರ ಕಪಟತನದಿಂದ, ಅವರ ಭ್ರಷ್ಟಾಚಾರದಿಂದ ಬಿಜೆಪಿ ಸೋತಿದೆ ಎಂದು ಪ್ರಕಾಶ್ ರಾಜ್ ನುಡಿದರು.

ಮಹೇಂದ್ರ ಕುಮಾರ್ ಪರಿಚಯ ಸ್ವಲ್ಪ ಇತ್ತು. ಅವರು ಯುವಕರನ್ನು ಹದಗೆಡಿಸುತ್ತಿದ್ದಾರೆಂದು ನನಗೆ ಅವರ ಮೇಲೆ ಕೋಪವಿತ್ತು. ಅವರು ಬದಲಾದ ನಂತರ ಅವರನ್ನು ಭೇಟಿ ಮಾಡಿದೆ, ಅವರಲ್ಲಿ ಒಂದು ಅಸಹಾಯಕತೆ ಇತ್ತು, ಕೋಪವೂ ಇತ್ತು, ಪಶ್ಚಾತಾಪವೂ ಇತ್ತು. ಒಂದು ಕ್ರೌರ್ಯ, ಪಶ್ಚಾತಾಪ ಒಬ್ಬ ಮನುಷ್ಯನನ್ನು ಹೇಗೆ ಕುಗ್ಗಿಸುತ್ತದೆ ಎನ್ನುವುದನ್ನು ನೋಡಿದೆ ಎಂದು ಅವರು ನೆನಪಿಸಿಕೊಂಡರು.

ರಾಜಕಾರಣಿಗಳು ಶಸ್ತ್ರಾಸ್ತ್ರವನ್ನು ಪೂರೈಕೆ ಮಾಡುತ್ತಾರೆ, ಶ್ರೀಮಂತರು ಆ ಯುದ್ಧಕ್ಕೆ ಬೇಕಾದ ಊಟ-ಉಪಚಾರ ಖರ್ಚುಗಳನ್ನು ಮಾಡುತ್ತಾರೆ. ಬಡವರು ತಮ್ಮ ಮಕ್ಕಳನ್ನು ಯುದ್ಧಕ್ಕೆ ಕಳುಹಿಸುತ್ತಾರೆ. ಯುದ್ಧ ಮುಗಿದ ಮೇಲೆ ಈ ರಾಜಕಾರಣಿಗಳು, ಶ್ರೀಮಂತರು ಉಳಿದ ಶಸ್ತ್ರಾಸ್ತ್ರಗಳು, ವಸ್ತುಗಳನ್ನು ಮರಳಿ ಪಡೆಯುತ್ತಾರೆ. ಗೆದ್ದ ನೆಲದಲ್ಲಿ ಶ್ರೀಮಂತರು ವ್ಯಾಪಾರ ಮಾಡುತ್ತಾರೆ. ಅಲ್ಲಿ ತಮ್ಮ ಮಕ್ಕಳ ಹೆಣಗಳನ್ನು ಘೋರಿಗಳನ್ನು ಹುಡುಕುತ್ತಾ ಬಡವರು ಅಲೆದಾಡುತ್ತಾರೆ ಎಂದು ಪ್ರಕಾಶ್ ರಾಜ್ ಮಾರ್ಮಿಕವಾಗಿ ವಿವರಿಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಅದನ್ನು ಬೇಡ ಎಂದು ಜನ ಈ (ಬಿಜೆಪಿ) ಪಕ್ಷವನ್ನು ಆಯ್ಕೆ ಮಾಡಿದರು. ನಮ್ಮ ಗಾಯಗಳನ್ನು ವಾಸಿ ಮಾಡುತ್ತಾರೆ ಎನ್ನುವ ನಂಬಿಕೆಯಲ್ಲಿ ಇವರನ್ನು ಆಯ್ಕೆ ಮಾಡಿದರು. ಆದರೆ ಗಾಯಗಳನ್ನು ವಾಸಿ ಮಾಡಲು ಬಂದವರಿಂದಲೇ ಹೆಚ್ಚಿನ ಗಾಯಗಳಾಗುತ್ತಿವೆ. ಪುಲ್ವಾಮ ದಾಳಿಯ ಬಗ್ಗೆ ಟಿವಿಯಲ್ಲಿ ನೋಡುತ್ತಿದ್ದೆ. ಶವಪೆಟ್ಟಿಗಳ ಮೆರವಣಿಗೆ ಹೋಗುತ್ತಿತ್ತು. ಎಲ್ಲ ಶವಪೆಟ್ಟಿಗಳ ಗಾಡಿಗಳು ಹಳ್ಳಿಗಳತ್ತಾ ಹೋಗುತ್ತಿತ್ತು ಎಂದು ಅವರು ಉಲ್ಲೇಖಿಸಿದರು.

ಇತ್ತೀಚಿನ ವರ್ಷಗಳಲ್ಲಾಗಿರುವ ಹೆಣದ ರಾಜಕಾರಣ ಏನು ಮಾಡಿದ್ದಾರೆ. ಬಿಜೆಪಿ, ಬಜರಂಗದಳದವರು, ಆರೆಸ್ಸೆಸ್‍ ಅನ್ನು ಗಮನಿಸಿದರೆ ತಿಳಿಯುತ್ತಿದೆ. ಪರೇಶ್ ಮೇಸ್ತಾ ಪ್ರಕರಣ ನಮ್ಮ ಕಣ್ಣ ಮುಂದೆಯೇ ಇದೆ. ಇಲ್ಲಿ ಎಷ್ಟೋ ಜನ ಮಕ್ಕಳು ಸತ್ತಿದ್ದು, ಎಷ್ಟೋ ಜನ ಆಪಾದನೆಯ ಮೇಲೆ ಜೈಲಿನಲ್ಲಿದ್ದಾರೆ. ಪತ್ರಕರ್ತೆ ಗೌರಿಯನ್ನು ಕೊಂದ ಪರಶುರಾಮ ಒಬ್ಬನೇ ಮಗನಾಗಿದ್ದು, ಅವನ ತಂದೆ-ತಾಯಿ ಏನು ಮಾಡ್ತಿದ್ದಾರೆ ಎಂದು ಯಾರಾದರೂ ನೋಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು, ಈ ರೀತಿಯ ಹೋರಾಟಗಳಲ್ಲಿ ಈ ಬಡವರ ಮಕ್ಕಳು ಸತ್ತಿದ್ದಾರೆ. ಸಾವಿರಾರು ಕನಸುಗಳನ್ನು ಕೊಂದಿದ್ದಾರೆ ಎಂದರು.

ನಮ್ಮ ಮುಂದಿನ ಯುವಪೀಳಿಗೆಗೆ ನಮ್ಮ ಗಾಯಗಳನ್ನು ನೆನಪಿಸುತ್ತಾ, ಮಹೇಂದ್ರ ಕುಮಾರ್ ಅವರ ಪುಸ್ತಕಗಳನ್ನು ಅವರ ಆಲೋಚನೆಗಳನ್ನು ಹಂಚಿಕೊಳ್ಳಬೇಕು. ಅಂಬೇಡ್ಕರ್, ಬಸವಣ್ಣನವರನ್ನು ಓದಿಸುತ್ತೇವೆ. ಯಾಕೆಂದರೆ ನಮ್ಮ ಹಿರೋಗಳು ಅವರೇ ಅವರನ್ನು ಬೆಳೆಸಿಕೊಳ್ಳುತ್ತಾ ಹೋಗೋಣ ಎಂದು ಅವರು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News