ವಿಶೇಷ ತನಿಖಾ ತಂಡ ಸಿಎಂ, ಡಿಸಿಎಂ ಅವರ ರಬ್ಬರ್ ಸ್ಟ್ಯಾಂಪ್ : ಆರ್.ಅಶೋಕ್
ಬೆಂಗಳೂರು : ವಿಶೇಷ ತನಿಖಾ ತಂಡ(ಎಸ್‌ಐಟಿ) ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ರಬ್ಬರ್ ಸ್ಟ್ಯಾಂಪ್ ಆಗಿದೆ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಮಂಗಳವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್‌ಐಟಿ ತನಿಖಾ ತಂಡ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರ ರಬ್ಬರ್ ಸ್ಟ್ಯಾಂಪ್ ಆಗಿದೆ. ಅವರು ಎಲ್ಲಿ ಹೇಳುತ್ತಾರೋ ಅಲ್ಲಿ ಒತ್ತುತ್ತಾರೆ. ಪೆನ್‍ಡ್ರೈವ್ ಶೇಖರಿಸಿದರೆ, ಬಿಡುಗಡೆ ಮಾಡಿದರೆ ಜೈಲಿಗೆ ಹಾಕುತ್ತೇವೆಂದು ಎಸ್‌ಐಟಿ ಹೇಳಿದೆ. ಆದರೆ, ಪೆನ್‍ಡ್ರೈವ್ ಮಾಡಿದವರನ್ನು ಯಾಕಪ್ಪ ಬಂಧನ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದರು.
ಪೆನ್‍ಡ್ರೈವ್ ಮಾಡಿ ಹಂಚಿಕೆ ಮಾಡಿದೆ
ಒಬ್ಬ ಚಾಲಕ ಸಿಂಗಾಪುರಕ್ಕೆ ಹೋಗಿದ್ದಾನೆ ಅಂದರೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಅವರು, ರಾಜ್ಯ ಸರಕಾರವೇ ಪೆನ್‍ಡ್ರೈವ್ ಮಾಡಿ ಹಂಚಿಕೆ ಮಾಡಿದೆ. ಹೆಣ್ಣು ಮಕ್ಕಳ ಮಾನ, ಪ್ರಾಣ ರಕ್ಷಣೆ ಮಾಡುತ್ತೇವೆಂದು ಹೇಳಿ ಪ್ರಮಾಣವಚನ ಸ್ವೀಕರಿಸಿದರು. ಅವರೇ ಪೆನ್‍ಡ್ರೈವ್ ಮಾಡಿ ಬಿಡುಗಡೆ ಮಾಡಿದ್ದಾರೆ. ಕೂಡಲೇ ರಾಜ್ಯಪಾಲರು ಪ್ರವೇಶ ಮಾಡಿ ಸರಕಾರ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಬಿಡಿಎ ಸ್ವತ್ತು ಲೀಸ್: ರಾಜ್ಯ ಸರಕಾರ ದಿವಾಳಿಯಾಗಿದೆ. ದೇಶದಲ್ಲಿ ಆರ್ಥಿಕ ಸ್ಥಿತಿಯಲ್ಲಿ ಎರಡು, ಮೂರನೆ ಸ್ಥಾನದಲ್ಲಿದ್ದೆವು. ಈಗ ಕೊನೆ ಸ್ಥಾನಕ್ಕೆ ಹೋಗಿದ್ದೇವೆ. ಹಿಂದೆ ಮಹಾರಾಜ ಕಾಂಪ್ಲೆಕ್ಸ್ ಹರಾಜು ಹಾಕಿತ್ತು. ಮಹಾಲಕ್ಷ್ಮಿ ಚೇಂಬರ್ಸ್ ಹರಾಜು ಹಾಕಿತ್ತು. ಈಗ ಹೊಸದಾಗಿ ಆರು ಬಿಡಿಎ ಕಾಂಪ್ಲೆಕ್ಸ್ ಗಳನ್ನು ಮಾರಾಟ ಮಾಡಲು ಹೊರಟಿದೆ. 50 ವರ್ಷಗಳ ಕಾಲ ಲೀಸ್ ಕೊಡಲು ಮುಂದಾಗಿದೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದರು.