ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸದಾ ಸ್ಮರಣೀಯ: ಶಾಸಕ ಬಿ.ಎ.ಬಸವರಾಜ

Update: 2023-08-15 12:29 GMT

ಬೆಂಗಳೂರು, ಆ.15: ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತವನ್ನು ಮುಕ್ತಗೊಳಿಸಲು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ, ಬಲಿದಾನ ನೀಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಸದಾ ಸ್ಮರಿಸಬೇಕು ಎಂದು ಶಾಸಕ ಬಿ.ಎ.ಬಸವರಾಜ ಹೇಳಿದರು.

ಮಂಗಳವಾರ ಬೆಂಗಳೂರು ಪೂರ್ವ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕೆ.ಆರ್.ಪುರದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 77ನೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು, ಸುಭಾಷ್ ಚಂದ್ರಬೋಸ್, ವಲ್ಲಭಭಾಯಿ ಪಟೇಲ್, ಬಾಲಗಂಗಾಧರನಾಥ ತಿಲಕ್, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕ ಮಹನೀಯರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದು ಅವರು ಹೇಳಿದರು.

ದೇಶದ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಟೊಂಕಕಟ್ಟಿ ನಿಲ್ಲಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ತನ್ನ ನೀತಿಗಳು, ಯೋಜನೆಗಳು, ಕಾರ್ಯಕ್ರಮಗಳ ಮೂಲಕ ದೇಶವನ್ನು ಪ್ರಗತಿಯತ್ತ ಸಾಗಿಸುತ್ತಿದೆ. ಭಾರತವನ್ನು ವಿಶ್ವಭೂಪಟದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಕಾಣಲು ನರೇಂದ್ರ ಮೋದಿಯವರ ಕೈ ಬಲಪಡಿಸಬೇಕಿದೆ ಎಂದು ಬಸವರಾಜ ಹೇಳಿದರು.

ಸ್ವಾಗತ ಭಾಷಣ ಮಾಡಿದ ಬೆಂಗಳೂರು ಪೂರ್ವ ತಾಲೂಕಿನ ತಹಶೀಲ್ದಾರ್ ರವಿ ವೈ., ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತವು, ಕಳೆದ 76 ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ, ರಕ್ಷಣಾ ವಲಯ ಹೀಗೆ ಅನೇಕ ರಂಗಗಳಲ್ಲಿ ತನ್ನ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಇಡೀ ವಿಶ್ವದಲ್ಲೆ ಅತಿ ಹೆಚ್ಚು ಯುವ ಶಕ್ತಿಯನ್ನು ಹೊಂದಿರುವ ದೇಶ ಭಾರತ. ಈ ಯುವ ಸಮುದಾಯದ ಜ್ಞಾನ, ಕೌಲಶ್ಯದ ಸದ್ಭಳಕೆಯಾಗಬೇಕಿದೆ. ನಮ್ಮ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಹಾಕಿದ ಅಡಿಪಾಯದಿಂದಾಗಿ ಇವತ್ತು ಬೆಂಗಳೂರು ಇಡೀ ದೇಶದಲ್ಲೆ ‘ಸಿಲಿಕಾನ್ ವ್ಯಾಲಿ’ ಎಂದು ಗುರುತಿಸಿಕೊಂಡಿದೆ ಎಂದು ಅವರು ಹೇಳಿದರು.

ನಾಗರಿಕ ಬಂಧುಗಳು ನಮ್ಮ ಸುತ್ತಮುತ್ತಲು ಇರುವ ಪರಿಸರವನ್ನು ಸ್ವಚ್ಛವಾಗಿಡುವುದರ ಜೊತೆಗೆ ಕೆರೆ ಕಟ್ಟೆಗಳು, ಉದ್ಯಾನವನಗಳು ಹಾಗೂ ಸಸ್ಯ ಸಂಪತ್ತನ್ನು ರಕ್ಷಿಸುವ ಸಂಕಲ್ಪ ಮಾಡಬೇಕು. ರಾಷ್ಟ್ರಕವಿ ಕುವೆಂಪು ಹೇಳಿರುವಂತೆ ನಮ್ಮ ನಾಡು ‘ಸರ್ವ ಜನಾಂಗದ ಶಾಂತಿಯ ತೋಟ’. ಜಾತಿ, ಧರ್ಮಗಳ ಕಟ್ಟುಪಾಡುಗಳಿಂದ ಹೊರಗೆ ಬಂದು ಜಗತ್ತಿಗೆ ವಿಶ್ವಮಾನವತೆಯ ಸಂದೇಶವನ್ನು ಸಾರೋಣ ಎಂದು ರವಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಹದೇವಪುರ ವಲಯ ಜಂಟಿ ಆಯುಕ್ತೆ ಡಾ.ಕೆ.ದಾಕ್ಷಾಯಿಣಿ, ಬೆಂಗಳೂರು ಪೂರ್ವ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ.ವಸಂತ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ರಾಮಮೂರ್ತಿ, ಬಿಬಿಎಂಪಿ ಮಾಜಿ ಸದಸ್ಯ ಪಿ.ಜೆ.ಅಂತೋಣಿ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಾರ್ತಾಭಾರತಿ  ಹಿರಿಯ ವರದಿಗಾರ ಅಮ್ಜದ್‍ಖಾನ್ ಗೆ ಸನ್ಮಾನ

ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ವಾರ್ತಾಭಾರತಿ ಬೆಂಗಳೂರು ಆವೃತ್ತಿಯ ಹಿರಿಯ ವರದಿಗಾರ ಅಮ್ಜದ್‍ಖಾನ್ ಎಂ. ಅವರಿಗೆ ಬೆಂಗಳೂರು ಪೂರ್ವ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News