ಸಕಲೇಶಪುರ | ರಕ್ಷಿತಾರಣ್ಯದಲ್ಲಿ ಅಕ್ರಮ ರೆಸಾರ್ಟ್ ನಿರ್ಮಾಣ ಆರೋಪ; ಅರಣ್ಯ ಅಧಿಕಾರಿಗಳ ದಾಳಿ, ರೆಸಾರ್ಟ್ ವಶಕ್ಕೆ

Update: 2023-07-19 07:13 GMT

ಸಕಲೇಶಪುರ, ಜು.19: ತಾಲೂಕಿನ ಬಿಳಿಸಾರೆಯಲ್ಲಿರುವ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮನೆ ಹಾಗೂ ರೆಸಾರ್ಟ್ ನಿರ್ಮಾಣ ಮಾಡಿದ ಆರೋಪದಡಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ ರೆಸಾರ್ಟ್ಅನ್ನು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.

ತಾಲೂಕಿನ ಅಚ್ಚನಹಳ್ಳಿ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸ್ಟೋನ್ ವ್ಯಾಲಿ ರೆಸಾರ್ಟ್ ನಿರ್ಮಾಣ ಮಾಡಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಬೆಂಗಳೂರಿನ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಫ್ಒ ಶಿಲ್ಪಾ ನೇತೃತ್ವದಲ್ಲಿ ದಾಳಿ ಮಾಡಿ ರೆಸಾರ್ಟ್ ಹಾಗೂ ಮಾಲಕರ ವಾಸದ ಮನೆಗೆ ಬೀಗ ಜಡಿದಿದ್ದಾರೆ ಎನ್ನಲಾಗಿದೆ.

ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಹಾಗೂ ಸ್ಥಳೀಯ ಇಲಾಖೆ ನೋಟಿಸ್ ಜಾರಿ ಮಾಡಿತ್ತು ಎನ್ನಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸೇರಿ 30ಕ್ಕೂ ಹೆಚ್ಚು ಮಂದಿ ಸ್ಟೋನ್ ವ್ಯಾಲಿ ರೆಸಾರ್ಟ್ ಮೇಲೆ ದಾಳಿ ನಡೆಸಿ, ಸಂಪೂರ್ಣವಾಗಿ ರೆಸಾರ್ಟ್ ಪಶೀಲನೆ ನಡೆಸಿದರು.

ಇತ್ತೀಚೆಗೆ ವನಗೂರು ಸಮೀಪದ ರೆಸಾರ್ಟ ಗೆ ಅರಣ್ಯ ಇಲಾಖೆ ಬೀಗ ಜಡಿದಿದೆ. ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್ 4 ಅಡಿ ಅರಣ್ಯ ಇಲಾಖೆ ಕ್ರಮವಹಿಸಿದೆ.

ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ರೆಸಾರ್ಟ್ ಹಾಗೂ ಹೋಂ ಸ್ಟೇಗಳು ನಿರ್ಮಾಣವಾಗಿವೆ. ಅವು ಚಾಲ್ತಿಯಲ್ಲೂ ಇವೆ. ಆದರೆ ಕೇವಲ ಒಂದೇ ಒಂದು ರೆಸಾರ್ಟ್ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಕಲೇಶಪುರ ಬಿಜೆಪಿ ಶಾಸಕ ಸಿಮೆಂಟ್ ಮಂಜು ಅವರು ಸದನದಲ್ಲಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಮರು ದಿನವೇ ಬೆಂಗಳೂರಿನಿಂದ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ದಾಳಿ ನಡೆಸಿದ್ದಾರೆ. ರಕ್ಷಿತಾರಣ್ಯ ಒತ್ತುವರಿ ಮಾಡಿ ರೆಸಾರ್ಟ್ ನಿರ್ಮಿಸಿರುವ ಆರೋಪದಡಿ ಕೆಲವು ದಿನಗಳ ಹಿಂದೆ ಮಾಲಕರಿಗೆ ಅರಣ್ಯ ನೋಟಿಸ್ ನೀಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News