ಎಲ್ಲಾ ಧರ್ಮಗಳಲ್ಲೂ ತಾರತಮ್ಯ ಇದೆ; ಸನಾತನ ಧರ್ಮದ ವಿರುದ್ಧ ಹೇಳಿಕೆ ಖಂಡನೀಯ: ನಿವೃತ್ತ IPS ಅಧಿಕಾರಿ ಭಾಸ್ಕರ್ ರಾವ್
ಮೈಸೂರು,ಸೆ.13: ಸನಾತನ ಧರ್ಮ, ಹಿಂದೂ ಧರ್ಮ ಒಂದೇ, ಎಲ್ಲಾ ಧರ್ಮಗಳಲ್ಲೂ ತಾರತಮ್ಯ ಇದ್ದೇ ಇದೆ. ಹಾಗಂತ ಸನಾತನ ಧರ್ಮದ ವಿರುದ್ಧ ಮಾತನಾಡುವುದು ಖಂಡನೀಯ ಎಂದು ನಿವೃತ್ತ ಎಡಿಜಿಪಿ ಹಾಗೂ ಬಿಜೆಪಿ ಮುಖಂಡ ಭಾಸ್ಕರ್ ರಾವ್ ತಿಳಿಸಿದರು.
ʼʼಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸನಾತನ ಧರ್ಮದ ಬಗ್ಗೆ ಮಾತನಾಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮನೆಯೊಳಗೆ ಸನಾತನ ಧರ್ಮದ ಆಚರಣೆಗಳು ನಡೆಯುತ್ತಿತ್ತುʼʼ ಎಂದು ಹೇಳಿದರು.
ʼಯಾವುದೇ ಒಂದು ಧರ್ಮದ ಬಗ್ಗೆ ಮಾತನಾಡಬಾರದು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಸಚಿವ ಉದಯನಿಧಿ ಸ್ಟಾಲಿನ್ ಗೆ ಸಂವಿಧಾನದ ತಿಳುವಳಿಕೆ ಇಲ್ಲ, ಸನಾತನ ಧರ್ಮ ಡೆಂಗ್ಯೂ, ಸೊಳ್ಳೆ ನಿರ್ಮೂಲನೆ ಮಾಡಬೇಕು ಎಂದರೆ ಅವರೇ ನಿರ್ಮೂಲನೆಯಾಗಲಿದ್ದಾರೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸನಾತನ ಧರ್ಮದಲ್ಲಿ ಸಮಾನತೆ ಇಲ್ಲ ಎಂದರೆ ಯಾವ ಧರ್ಮದಲ್ಲಿ ಸಮಾನತೆ ಇದೆ. ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ ಧರ್ಮಗಳಲ್ಲೂ ತಾರತಮ್ಯ ಇಲ್ಲವೇ? ಸನಾತನ ಧರ್ಮ ಈ ದೇಶದ ಶೇ80 ರಷ್ಟು ಜನರ ಧರ್ಮ ಅದನ್ನು ಬಲಪಡಿಸುವ ಕೆಲಸವನ್ನು ಬ್ರಾಹ್ಮಣೇತರರು ಮಾಡಬೇಕಿದೆ ಎಂದು ಹೇಳಿದರು.
ವಿಪ್ರ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂದಿನಿಂದಲೂ ಟಾರ್ಗೆಟ್ ಮಾಡಲಾಗುತ್ತಿದೆ. ನಮ್ಮಲ್ಲಿ ಬಹುಬಲ ಇಲ್ಲದ ಕಾರಣ ಏನೂ ಮಾಡಲು ಆಗುತ್ತಿಲ್ಲ. ಆದರೆ ಬುದ್ಧಿ ಬಲದ ಮೇಲೆ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಪಕ್ಷ ಸೂಚಿಸಿದರೆ ಲೋಕಸಭೆಗೆ ಸ್ಪರ್ಧೆ ಮಾಡಲು ಸಿದ್ಧ:
ನಾನು ಮೈಸೂರು-ಕೊಡಗು ಕ್ಷೇತ್ರದಿಂದ ಲೋಜಸಭೆಗೆ ಸ್ಪರ್ಧೆ ಮಾಡಬೇಕು ಎಂದು ಕೇಳಿಲ್ಲ. ಆದರೆ ಪಕ್ಷದ ಹೈಕಮಾಂಡ್ ನೀವು ಸ್ಪರ್ಧೆ ಮಾಡಿ ಎಂದರೆ ಚುನಾವಣೆಗೆ ನಿಲ್ಲಲು ಸಿದ್ಧನಿದ್ದೇನೆ ಎಂದು ಹೇಳುವ ಮೂಲಕ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಟಾಂಗ್ ನೀಡಿದರು.