ಅಕ್ಟೋಬರ್‌ನಲ್ಲಿ 40 ಲಕ್ಷ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್: ದಿನೇಶ್ ಗುಂಡೂರಾವ್

Update: 2023-09-11 10:35 GMT

ಮಂಗಳೂರು, ಸೆ. 11: ಅಕ್ಟೋಬರ್ ತಿಂಗಳಿನಿಂದ ರಾಜ್ಯದ 40 ಲಕ್ಷ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ ನಡೆಸಲಾಗುವುದು. 2013ರಲ್ಲಿ ಸಿದ್ಧರಾಮಯ್ಯ ಸರಕಾರ ಜಾರಿಗೆ ತಂದಿದ್ದ ಈ ಕಾರ್ಯಕ್ರಮ ಕಳೆದ ಮೂರು ವರ್ಷಗಳಿಂದ ಸ್ಥಗಿತವಾಗಿದ್ದು, ಅದನ್ನು ಮುಂದುವರಿಸಲಾಗುವುದು ಎಂದುರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮಂಗಳೂರಿನ ನೆಹರೂ ಮೈದಾನದಲ್ಲಿ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಯೋಜನೆಯಡಿ ಸರಕಾರಿ ಪದವಿ ಹಾಗೂ ಅನುದಾನಿತ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮೈತ್ರಿ ಕಪ್ (ಮುಟ್ಟಿನ ಕಪ್) ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ 10ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಗುವುದು. ಪದವಿ ತರಗತಿಗಳ ವಿದ್ಯಾರ್ಥಿನಿಯರಿಗೆ ಮೈತ್ರಿ ಕಪ್ ಆರಂಭಿಕವಾಗಿ ದ.ಕ. ಹಾಗೂ ಚಾಮರಾಜನಗರ ಜಿಲ್ಲೆಯ ಒಟ್ಟು 15000 (ದ.ಕ. ಜಿಲ್ಲೆಯಲ್ಲಿ 11000 ಹಾಗೂ ಚಾಮರಾಜನಗರದ 4 ಸಾವಿರ)ವಿದ್ಯಾರ್ಥಿನಿಯರಿಗೆ ವಿತರಿಸಲಾಗುತ್ತಿದ್ದು, ಈ ಪ್ರಾಯೋಗಿಕ ವಿತರಣೆಯ ಬಳಿಕ ಇದನ್ನು ರಾಜ್ಯದೆಲ್ಲೆಡೆ ಉಚಿತವಾಗಿ ವಿತರಿಸಲಾಗುವುದು ಎಂದರು.

ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವ ಸಲುವಾಗಿ 2013-14ನೆ ಸಾಲಿನಲ್ಲಿ ಸಿದ್ಧರಾಮಯ್ಯ ಸರಕಾರ ಈ ಸ್ಯಾನಿಟರಿ ಪ್ಯಾಡ್ ವಿತರಣೆ ಕಾರ್ಯಕ್ರಮ ಆರಂಭಿಸಿತ್ತು. ಮುಟ್ಟಿನ ಸಂದರ್ಭದಲ್ಲಿ ಅನಾನುಕೂಲತೆಯಿಂದಾಗಿ ಸಾಕಷ್ಟು ವಿದ್ಯಾರ್ಥಿನಿಯರು ಶಾಲಾ ಕಾಲೇಜುಗಳ ತರಗತಿಗೆ ಹಾಜರಾಗಲು ತೊಂದರೆ ಅನುಭವಿಸುವುದನ್ನು ತಪ್ಪಿಸಲು ಈ ಯೋಜನೆ ಆರಂಭಿಸಲಾಗಿದೆ ಎಂದರು.

ಮೈತ್ರಿ ಕಪ್‌ಗಳ ಬಳಕೆಯಿಂದ ವಿದ್ಯಾರ್ಥಿನಿಯರಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಲಿದೆ. ಜತೆಗೆ ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯಿಂದಾಗುವ ಪರಿಸರದ ಮೇಲಿನ ಹಾನಿಯನ್ನೂ ತಡೆಯಬಹುದು ಎಂದರು.

ಇದನ್ನು ಉಪಯೋಗಿಸುವ ವಿದ್ಯಾರ್ಥಿನಿಯರು ಇತರ ವಿದ್ಯಾರ್ಥಿಗಳ ಪಾಲಿನ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಬೇಕು, ಅರಿವು ಮೂಡಿಸಬೇಕು. ಮುಟ್ಟಿನ ಸಂದರ್ಭದಲ್ಲಿ ಹೆಣ್ಣು ಅಪವಿತ್ರವಾಗಿರುತ್ತಾಳೆ ಎಂಬ ಮನಸ್ಥಿತಿಯಿಂದ ಸಮಾಜವನ್ನು ಹೊರ ತರಬೇಕಾಗಿದೆ ಎಂದವರು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಆಧುನಿಕ ವ್ಯವಸ್ಥೆಯಲ್ಲಿ ಅಗತ್ಯ ಸೌಲಭ್ಯಗಳು ಎಲ್ಲರಿಗೂ ದೊರಕಬೇಕೆಂಬ ನಿಟ್ಟಿನಲ್ಲಿ ಜಾರಿಗೆ ತರಲಾದ ಈ ಮೈತ್ರಿ ಕಪ್ ವಿತರಣೆ ಯೋಜನೆ ಆರೋಗ್ಯ ಮತ್ತು ಪರಿಸರದ ದೃಷ್ಟಿಯಿಂದ ಅನುಕೂಲಕರ ಎಂದರು.

ಶಿಕ್ಷಕ ವರ್ಗ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಯೋಜನೆಯ ರಾಯಭಾರಿಗಳಾಗಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಮಾಡಬೇಕು ಎಂದರು.

ನೂತನ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಲೇಡೀಸ್ ಹಾಸ್ಟೆಲ್‌ಗಳಿಂದ ಒಳಚರಂಡಿಗೆ ಸ್ಯಾನಿಟರಿ ಪ್ಯಾಡ್‌ಗಳು ಸೇರುತ್ತಿರುವುದರಿಂದ ಹಲವೆಡೆ ಬ್ಲಾಕ್ ಆಗುವ ಸಂದರ್ಭಗಳು ತಲೆದೋರುತ್ತಿದೆ. ಇದನ್ನು ಬಳಸುವ ವಿದ್ಯಾರ್ಥಿನಿಯರು ರಾಯಭಾರಿಗಳಾಗಿ ಈ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಾದ ಡಾ.ಎಂ. ಇಂದುಮತಿ, ಯೋಜನಾ ನಿರ್ದೇಶಕ ಡಾ. ಶ್ರೀನಿವಾಸ್ ಜಿ.ಎನ್., ಉಪ ನಿರ್ದೇಶಕರಾದ ಡಾ. ವೀಣಾ ವಿ.,ವಿಭಾಗೀಯ ಸಹಾ ನಿರ್ದೇಶಕರಾದ ಡಾ. ರಾಜೇಶ್ವರಿ ದೇವಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಮೊದಲಾದವರು ಉಪಸ್ಥಿತರಿದ್ದರು.

‘ರಾಷ್ಟ್ರ ಮಟ್ಟದ ಸ್ವಿಮ್ಮರ್ ಆಗಿ ಪ್ರಥಮ ಪದಕ ಪಡೆದಿದ್ದು, ಹಾಗೂ ಚನಲಚಿತ್ರದ ಮೂಲಕ ಹೆಸರು ಮಾಡಿದ್ದು ಮಂಗಳೂರಿನಿಂದಲೇ ಎಂಬ ಹೆಮ್ಮೆ ಇದೆ. ಇದೀಗ ಸರಕಾರ ಮೈತ್ರಿ ಕಪ್ ಯೋಜನೆಯ ರಾಯಭಾರಿಯಾಗಿ ನನ್ನನ್ನು ಪರಿಗಣಿಸಿರುವುದು ದೊಡ್ಡ ವಿಚಾರ. ಪ್ರತಿ ಕ್ಷೇತ್ರದಲ್ಲೂ ಸಾಧನೆ ತೋರುವ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಸ್ಯೆ ಬಾಧಕವಾಗಬಾರದು. ಸ್ಯಾನಿಟರಿ ಪ್ಯಾಡ್‌ನ ವಿಲೇ ಸಮಸ್ಯೆ ಜತೆಗೆ ಮುಜಗರ ಹುಟ್ಟಿಸುವಂತದ್ದು. ಹೆಣ್ಣು ಮಗಳೊಬ್ಬಳು ತನ್ನ ಮುಟ್ಟಿನ ಜೀವನದಲ್ಲಿ ಸುಮಾರು 200 ಕೆಜಿಯಷ್ಟು ಸ್ಯಾನಿಟರಿ ಪ್ಯಾಡ್ ತ್ಯಾಜ್ಯವನ್ನು ಸೃಷ್ಟಿಸುತ್ತಾಳೆ. ಅದಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿಯಾಗಿ ಈ ಮೈತ್ರಿ ಕಪ್ ಬಳಕೆ ಅನುಕೂಲಕರ. ನನಗೂ ಇದರ ಬಗ್ಗೆ ಆರಂಭದಲ್ಲಿ ಮಾಹಿತಿ ನೀಡಿದ್ದು ನನ್ನ ಅಮ್ಮ. ಹಾಗಾಗಿ ಮಕ್ಕಳ ತಾಯಂದಿರಿಗೆ ಈ ಬಗ್ಗೆ ಸಮಾಲೋಚನೆ ಮೂಲಕ ಮಾಹಿತಿ ಜಾಗೃತಿ ಮೂಡಿಸುವುದು ಉತ್ತಮ ವಿಚಾರ. ವಿಶ್ವದಲ್ಲಿಯೇ ಮಹಿಳೆಯರು ಈ ಕಪ್‌ನ ಬಳಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.’

-ಸಪ್ತಮಿ ಗೌಡ, ಚಲನಚಿತ್ರ ನಟಿ, ಸರಕಾರದ ಮೈತ್ರಿ ಕಪ್ ಯೋಜನೆಯ ರಾಯಭಾರಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News