ಡಿಕೆಶಿ ವಿರುದ್ಧ ಭ್ರಷ್ಟಾಚಾರ ಪ್ರಕರಣ: ಕರ್ನಾಟಕ ಹೈಕೋರ್ಟ್ ನ ಮಧ್ಯಂತರ ತಡೆಯಾಜ್ಞೆಗೆ ಹಸ್ತಕ್ಷೇಪ ನಡೆಸಲು ಸುಪ್ರೀಂಕೋರ್ಟ್ ನಕಾರ
ಹೊಸದಿಲ್ಲಿ: ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ಸಿಬಿಐ ತನಿಖೆಗೆ ಮಧ್ಯಂತರ ತಡೆ ವಿಧಿಸಿ ಕರ್ನಾಟಕ ಹೈಕೋರ್ಟ್ ಹೊರಡಿಸಿದ ಆದೇಶದ ಕುರಿತಂತೆ ಹಸ್ತಕ್ಷೇಪ ನಡೆಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ಮಧ್ಯಂತರ ತಡೆಯಾಜ್ಞೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಿದ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ನೇತೃತ್ವದ ಪೀಠ ಈ ಪ್ರಕರಣದ ಶೀಘ್ರ ವಿಚಾರಣೆ ನಡೆಸಿ ಇತ್ಯರ್ಥಪಡಿಸಬೇಕು ಎಂದು ಹೈಕೋರ್ಟಿಗೆ ಸೂಚಿಸಿದೆ
ಸಿಬಿಐ ತನಿಖೆಗೆ ಹೈಕೋರ್ಟ್ ಫೆಬ್ರವರಿ 10ರಂದು ತಡೆಯಾಜ್ಞೆ ವಿಧಿಸಿದ್ದರೆ ನಂತರ ಈ ತಡೆಯನ್ನು ಮುಂದಿನ ವಿಚಾರಣೆಗಳಲ್ಲಿ ವಿಸ್ತರಿಸುತ್ತಾ ಬಂದಿತ್ತು.
2017ರಲ್ಲಿ ಆದಾಯ ತೆರಿಗೆ ಇಲಾಖೆ ಶಿವಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಇದರ ಆಧಾರದಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದ ನಂತರ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿಬಿಐ ಆಗಿನ ರಾಜ್ಯ ಸರಕಾರದ ಅನುಮತಿ ಕೋರಿತ್ತು. ಸೆಪ್ಟೆಂಬರ್ 25, 2019ರಲ್ಲಿ ರಾಜ್ಯ ಸರ್ಕಾರದ ಅನುಮತಿ ದೊರೆತ ನಂತರ ರೂ 74.93 ಕೋಟಿ ಮೌಲ್ಯದಷ್ಟು ಅಕ್ರಮ ಆಸ್ತಿ ಹೊಂದಿದ್ದಕ್ಕಾಗಿ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.
ಇದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಕದ ತಟ್ಟಿದ್ದ ಶಿವಕುಮಾರ್, ವಿಧಾನಸಭಾ ಚುನಾವಣೆ ನಡೆಯಲಿದೆ ಎನ್ನುವಾಗ ಸತತ ನೋಟಿಸ್ ನೀಡಿ ತನಗೆ ಮಾನಸಿಕ ಒತ್ತಡ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದ್ದರು.