ಬಿಜೆಪಿ ಅವಧಿಯಲ್ಲಿ 2.26ಕೋಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಂಚನೆ ಆರೋಪ: ತನಿಖೆಗೆ ಆಗ್ರಹ

Update: 2023-06-25 11:11 GMT

ಬೆಂಗಳೂರು, ಜೂ.25: ಬಿಜೆಪಿ ಸರಕಾರದ ಅವಧಿಯಲ್ಲಿ ಎಸ್‍ಸಿ-ಎಸ್‍ಟಿ ಹಾಗೂ ಹಿಂ.ವರ್ಗಗಳ ಸುಮಾರು 2.26ಕೋಟಿ ಅರ್ಹ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ನೀಡದೆ ವಂಚನೆ ಮಾಡಲಾಗಿದೆ. ಈ ಅವ್ಯವಸ್ಥೆಗೆ ಕಾರಣರಾದ ಎಲ್ಲ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಿ ತನಿಖೆ ಕೈಗೊಳ್ಳಬೇಕೆಂದು ಪ್ರಜಾಸತ್ತಾತ್ಮಕ ದಲಿತ ವಿದ್ಯಾರ್ಥಿ ಒಕ್ಕೂಟ ಆಗ್ರಹಿಸಿದೆ.

ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮೌರ್ಯ, ಎಸ್‍ಸಿ-ಎಸ್‍ಟಿ, ಹಿಂ.ವರ್ಗಗಳ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ವಿದ್ಯಾರ್ಥಿ ವೇತನ ನೂತನ ಎಸ್‍ಎಸ್‍ಪಿ ತಂತ್ರಾಂಶದ ನೆಪ ಹೇಳಿಕೊಂಡು ಉದ್ದೇಶಪೂರಕವಾಗಿ ವಿದ್ಯಾರ್ಥಿ ವೇತನದಿಂದ ಅರ್ಹರನ್ನು ವಂಚಿತರನ್ನಾಗಿ ಮಾಡಲಾಗಿದೆ. ಇದಕ್ಕೆ ಕಾರಣವಾದ ಸಮಾಜ ಕಲ್ಯಾಣ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಬಿಜೆಪಿ ಸರಕಾರದ ಅವಧಿಯ 2020-21ನೆ ಸಾಲಿನಿಂದಲೇ ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡುತ್ತಿಲ್ಲ. ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಲ್ಯಾಪ್‍ಟಾಪ್‍ಗಳನ್ನು ನಿಲ್ಲಿಸಿದೆ ಹಾಗೂ ವಿವಿಗಳಲ್ಲಿಯೂ ಲ್ಯಾಪ್‍ಟಾಪ್‍ಗಳನ್ನು ನೀಡುತ್ತಿಲ್ಲ. ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನದಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ. ಈಗಿರುವ ಕಾಂಗ್ರೆಸ್ ಸರಕಾರ ಇದೆಲ್ಲವನ್ನೂ ಪರಿಗಣಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅವರು ಮನವಿ ಮಾಡಿದರು.

ಸರಕಾರವು ವಿದ್ಯಾರ್ಥಿವೇತನ ನೀಡುವುದನ್ನು ಆಯಾ ಇಲಾಖಾವಾರು ಜವಾಬ್ದಾರಿ ನೀಡಬೇಕು. ಜತೆಗೆ ಉನ್ನತ ಶಿಕ್ಷಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ವಿವಿಗಳಲ್ಲಿನ ವಿದ್ಯಾರ್ಥಿವೇತನ ಪರಿಶೀಲಿಸಬೇಕು ಎಂದು ವೇಣುಗೋಪಾಲ್ ಮೌರ್ಯ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News