ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ದೊಡ್ಡ ವಿಚಾರವಲ್ಲ: ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು, ಜು.18: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿಪಕ್ಷಗಳ ಜತೆ ಸೇರಿ ಕ್ಷೇತ್ರವಾರು ಸೀಟು ಹಂಚಿಕೆ ಮಾಡುವ ವಿಚಾರ ಅಷ್ಟೊಂದು ದೊಡ್ಡದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಮಂಗಳವಾರ ಖಾಸಗಿ ಹೋಟೆಲ್‍ನಲ್ಲಿ "ಒಂದಾಗಿದ್ದೇವೆ ನಾವು" ರಾಷ್ಟ್ರೀಯ ವಿಪಕ್ಷಗಳ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೀಟು ಹಂಚಿಕೆ ವಿಚಾರ ದೊಡ್ಡ ವಿಚಾರವಲ್ಲ. ನಮ್ಮ ಸಮನ್ವಯ ಸಮಿತಿ ತೀರ್ಮಾನ ಮಾಡಲಿದೆ. ಎಲ್ಲ್ಲ ನಾಯಕರು, ಸಮಿತಿ ಸೇರಿ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಸ್ಥಳೀಯ ಪಕ್ಷಗಳನ್ನು ಇಬ್ಭಾಗ ಮಾಡುತ್ತಿದ್ದು, ಈ ಸಮಯದಲ್ಲಿ ನೀವು ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಹೇಗೆ ಒಗ್ಗಟ್ಟಾಗಿ ಕೊಂಡೊಯ್ಯುತ್ತೀರಿ ಎಂಬ ಪ್ರಶ್ನೆಗೆ, ಎನ್‍ಸಿಪಿ ನಾಯಕ ಶರದ್ ಪವಾರ್, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಸೇರಿದಂತೆ ಪ್ರಾದೇಶಿಕ ಪಕ್ಷಗಳ ನಾಯಕರು ಇಲ್ಲಿದ್ದಾರೆ. ಶಾಸಕರು ಪಕ್ಷ ಬಿಟ್ಟು ಹೋಗಿರಬಹುದು. ಆದರೆ ಜನ ಈ ಪ್ರಮುಖ ನಾಯಕರ ಬೆನ್ನಿಗೆ ನಿಲ್ಲಲಿದ್ದಾರೆ. ನಾವು ಒಟ್ಟಾಗಿ ಇರುತ್ತೇವೆ. ಆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಉತ್ತರಿಸಿದರು.
ನಾವು 11 ಸದಸ್ಯರು ಸಮನ್ವಯ ಸಮಿತಿ ರಚಿಸುತ್ತಿದ್ದು, ಆ ಸಮಿತಿ ನಿರ್ಧರಿಸಲಿದೆ. ಈ ಸಮಿತಿ ಸದಸ್ಯರನ್ನು ಮುಂಬೈ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದ ಅವರು, ಯುಸಿಸಿ ಮಸೂದೆ ನನಗೆ ಸಿಕ್ಕಿಲ್ಲ. ನಿಮ್ಮ ಬಳಿ ಇದ್ದರೆ ಅದನ್ನು ನೀಡಿ. ಮಸೂದೆ ಇಲ್ಲದೆ ಅದರ ಬಗ್ಗೆ ಚರ್ಚೆ ಮಾಡಲು ಹೇಗೆ ಸಾಧ್ಯ? ನಾವು ಮಣಿಪುರ, ನಿರುದ್ಯೋಗ, ಹಣದುಬ್ಬರ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಹೇಗೆ ಹೋರಾಟ ಮಾಡಬೇಕು. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆ ವಿಚಾರವಾಗಿ ವಿಸ್ತಾರವಾಗಿ ಚರ್ಚೆ ಮಾಡಲಾಗಿದೆ ಎಂದು ಉಲ್ಲೇಖಿಸಿದರು.