ದೇಶದಲ್ಲಿ ಹೆಚ್ಚಿದ ನಿರುದ್ಯೋಗ, ಹಸಿವು, ಸಾವಿನ ಭಯದಿಂದ ಸ್ವ-ಉದ್ಯೋಗ ಆಯ್ಕೆ: ವರದಿ

Update: 2024-03-11 17:32 GMT

ಬೆಂಗಳೂರು: ದೇಶದಲ್ಲಿ ಪ್ರಸಕ್ತ 25 ವರ್ಷದೊಳಗಿನ ಶೇ.47ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಹಸಿವು ಮತ್ತು ಸಾವಿನ ಭಯದಿಂದ ಸ್ವ-ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ‘ಬಹುತ್ವ ಕರ್ನಾಟಕ ಸಂಘಟನೆ’ಯು ‘ಉದ್ಯೋಗ, ವೇತನ ಹಾಗೂ ಅಸಮತೆ’ ಎಂಬ ಶೀರ್ಷಿಕೆಯಡಿ ‘ಗ್ಯಾರೆಂಟಿ ಚೆಕ್’ ವರದಿಯನ್ನು ಪ್ರಕಟಿಸಿದೆ.

ಸೋಮವಾರ ಇಲ್ಲಿನ ಪ್ರೆಸ್‍ಕ್ಲಬ್ ಆವರಣದಲ್ಲಿ ಸಂಘಟನೆಯ ಸಂಚಾಲಕರಾದ ವಕೀಲ ವಿನಯ್ ಶ್ರೀನಿವಾಸ, ರಾಧಾ, ಭಾನುಪ್ರಿಯಾ, ಪ್ರೊ ರಾಜೇಂದ್ರನ್ ನಾರಾಯಣನ್, ಡಾ.ಬಸವರಾಜು ಬಿ.ಸಿ. ಮೈತ್ರೇಯಿ ಕೆ. ವರದಿಯನ್ನು ಪ್ರಕಟಿಸಿದ್ದಾರೆ.

ವರದಿಯಲ್ಲಿ ಪ್ರಸ್ತುತಪಡಿಸಲಾದ ಎಲ್ಲ ಅಂಕಿ ಅಂಶಗಳು ಮತ್ತು ವಿಶ್ಲೇಷಣೆಯು ಸಾರ್ವಜನಿಕವಾಗಿ ಲಭ್ಯವಿರುವ ಸರಕಾರಿ ದತ್ತಾಂಶವನ್ನು ಆಧರಿಸಿದೆ. ಪಿರಿಯಾಡಿಕ್ ಲೇಬರ್ ಫೋರ್ಸ್ ಸಮೀಕ್ಷೆ ಮತ್ತು ಈಗ ಸ್ಥಗಿತಗೊಂಡಿರುವ ಉದ್ಯೋಗ-ನಿರುದ್ಯೋಗ ಸಮೀಕ್ಷೆಯಿಂದ ದತ್ತಾಂಶವನ್ನು ಬಳಸಲಾಗಿದೆ. ವರದಿಯು 2022-23ನೇ ಸಾಲಿನಲ್ಲಿ ದೇಶದ 49 ಕೋಟಿ ಕಾರ್ಮಿಕರ ಸ್ಥಿತಿಗತಿ ಪ್ರತಿನಿಧಿಸುತ್ತದೆ ಬಹುತ್ವ ಕರ್ನಾಟಕ ಸಂಘಟನೆಯು ಸ್ಪಷ್ಟಪಡಿಸಿದೆ.

‘2011-12 ಹಾಗೂ 2022-23ರ ನಡುವಿನ ಹತ್ತು ವರ್ಷಗಳ ಅವಧಿಯಲ್ಲಿ ಸ್ವ-ಉದ್ಯೋಗಿಗಳ ಪ್ರಮಾಣ ಹೆಚ್ಚಾಗಿದೆ. ಅರ್ಧಕ್ಕಿಂತಲೂ ಹೆಚ್ಚು ಪುರುಷರು ಮತ್ತು ಮೂರರಲ್ಲಿ ಎರಡು ಭಾಗಕ್ಕಿಂತ ಹೆಚ್ಚು ಮಹಿಳೆಯರು ಈಗ ‘ಸ್ವ-ಉದ್ಯೋಗʼದ ಮೊರೆ ಹೋಗಿದ್ದಾರೆ. ಆದಾಯ ಇಲ್ಲದೆ ಕುಟುಂಬದ ಕೆಲಸದಲ್ಲೇ ಸಹಾಯಕರಾಗಿ ತೊಡಗಿಸಿಕೊಂಡ ಮಹಿಳೆಯರ ಪ್ರಮಾಣ ಐದು ವರ್ಷಗಳ ಹಿಂದೆ ಪ್ರತಿ 4 ಮಹಿಳೆಯರಿಗೆ ಒಬ್ಬರಿದ್ದರೆ, ಈಗ ಪ್ರತಿ 3 ಮಹಿಳೆಯರಿಗೆ ಒಬ್ಬರಾಗಿದ್ದಾರೆʼ ಎಂದು ವರದಿ ತಿಳಿಸಿದೆ.

ಬಿಜೆಪಿ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಕನಿಷ್ಠ ವೇತನದಲ್ಲಿ ಶೇ.42 ಬೆಳವಣಿಗೆ ಕಂಡುಬಂದಿದ್ದು, ಕಾರ್ಮಿಕರ ಗೌರವಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಮುಂದಿನ ಐದು ವರ್ಷಗಳಲ್ಲಿ ಅದೇ ದಾರಿಯಲ್ಲಿ ಸಾಗುತ್ತೇವೆ ಎಂದು ಘೋಷಿಸಿತ್ತು. ಆದರೆ, ವಾಸ್ತವದಲ್ಲಿ ಕಾರ್ಮಿಕರ ವೇತನಗಳು ಸ್ಥಗಿತಗೊಂಡಿವೆ. ಕಾರ್ಮಿಕ ಹಾಗು ಉದ್ಯೋಗ ಸಚಿವಾಲಯವು ನೇಮಿಸಿದ ಅನೂಪ್ ಸತ್ಪತಿ ಸಮಿತಿಯು ಭಾರತದಲ್ಲಿ ಮೂಲ ವೇತನವು ದಿನಕ್ಕೆ ಕನಿಷ್ಠ 375 ರೂ. ಇರಬೇಕೆಂದು ಸೂಚಿಸಿತ್ತು. ಆದರೆ ಈಗಲೂ ಅದು 178 ರೂ. ಇದೆ. ಸುಮಾರು 30 ಕೋಟಿ ಜನರು ಮೂಲ ವೇತನಕ್ಕಿಂತಲೂ ಕಡಿಮೆ ಗಳಿಸುತ್ತಿದ್ದಾರೆ ಎಂದು ವರದಿ ಬಹಿರಂಗಗೊಳಿಸಿದೆ.

ʼಸಬ್ ಕಾ ಸಾಥ್ ಸಬ್ ಕಾ ವಿಕಾಸ್ʼ ಎಂದು ಕೇಂದ್ರ ಸರಕಾರ ಘೋಷಿಸಿದ್ದು, ಹಿಂದಿನ 10 ವರ್ಷಗಳಲ್ಲಿ ಜಿಡಿಪಿ ಹೆಚ್ಚಾದರೂ, ಅದರಿಂದ ಶ್ರೀಮಂತರು ಉದ್ದಾರವಾಗುತ್ತಿದ್ದಾರೆ ಹೊರತು ಬಡವರಲ್ಲ. 2022ರಲ್ಲಿ ಶೇ.10ರಷ್ಟಿರುವ ಅತಿ ಶ್ರೀಮಂತರು ದೇಶದ ಒಟ್ಟು ಸಂಪತ್ತಿನಲ್ಲಿ ಶೇ.64.5ರಷ್ಟನ್ನು ಹೊಂದಿದ್ದಾರೆ. ಸಾಮಾನ್ಯ ವರ್ಗಕ್ಕೆ ಸೇರಿದ ಶೇ.50ರಷ್ಟು ಜನರು ದೇಶದ ಒಟ್ಟು ಸಂಪತ್ತಿನಲ್ಲಿ ಶೇ.5.6ರಷ್ಟು ಭಾಗ ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಸರಕಾರದ ಈ ವರ್ಷದ ಬಜೆಟ್ ಹಂಚಿಕೆಗಳು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿವೆ. ಐದು ಸಾಮಾಜಿಕ ವಲಯದ ಯೋಜನೆಗಳ(ನರೇಗಾ, ಎನ್‍ಎಸ್‍ಎಪಿ, ಮಧ್ಯಾಹ್ನದ ಊಟ, ಐಸಿಡಿಎಸ್ ಮತ್ತು ಪಿಎಂಎಂವಿವೈ) ಬಜೆಟ್ ಹಂಚಿಕೆಯು ಜಿಡಿಪಿಯ ಶೇ.0.40ರಷ್ಟು ಮಾತ್ರ ಇದೆ ಎಂದು ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News