ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರ ‘ಸ್ಟ್ರೇಂಜ್​ ಬರ್ಡನ್ಸ್​ – ದಿ ಪಾಲಿಟಿಕ್ಸ್​ ಆ್ಯಂಡ್ ಪ್ರೆಡಿಕಮೆಂಟ್ಸ್​ ಆಫ್​ ರಾಹುಲ್ ಗಾಂಧಿ’ ಪುಸ್ತಕ ಲೋಕಾರ್ಪಣೆ

Update: 2023-09-12 18:16 GMT

ಬೆಂಗಳೂರು, ಸೆ‌.12:ಕಾಂಗ್ರೆಸ್ ನಾಯಕ ರಾಹುಲ್ ಕುರಿತ ಪುಸ್ತಕ ಜೀವನಚರಿತ್ರೆಯಲ್ಲ ಬದಲಾಗಿ ಸಾಮಾಜಿಕ ವಿಶ್ಲೇಷಣೆಯ ದಾಖಲೆಯಾಗಿದೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್ ಅಭಿಪ್ರಾಯಪಟ್ಟರು.

ಮಂಗಳವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಸಭಾಂಗಣದಲ್ಲಿ ಪೆಂಗ್ವಿನ್​ ರ‍್ಯಾಂಡಮ್​ ಹೌಸ್ ಪ್ರಕಟಿಸಿರುವ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರ ‘ಸ್ಟ್ರೇಂಜ್​ ಬರ್ಡನ್ಸ್​ – ದಿ ಪಾಲಿಟಿಕ್ಸ್​ ಆ್ಯಂಡ್ ಪ್ರೆಡಿಕಮೆಂಟ್ಸ್​ ಆಫ್​ ರಾಹುಲ್ ಗಾಂಧಿ’ ((Strange Burdens- The Politics and Predicaments of Rahul Gandhi) ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ಟ್ರೇಂಜ್ ಬರ್ಡನ್ಸ್‌ ಇದು ಜೀವನ ಚರಿತ್ರೆಯಲ್ಲ. ರಾಜಕೀಯ ವ್ಯಾಖ್ಯಾನದ ಪುಸ್ತಕ. ಮಾರ್ಚ್ 2004ರಲ್ಲಿ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದಾಗಿನಿಂದ ರಾಹುಲ್ ಗಾಂಧಿ ಅವರ ಆಲೋಚನೆಗಳು ಮತ್ತು ನಾಯಕತ್ವವನ್ನು ಕೃತಿಯು ವಿಶ್ಲೇಷಿಸುತ್ತದೆ. ಜತೆಗೆ, ಈಗಿನ ಸಾಮಾಜಿಕ ದೃಷ್ಟಿಕೋನ ನೋಡುವ ದಾಖಲೆ ಆಗಿದೆ ಎಂದರು.

ಸುಗತ ಅವರ ಪುಸ್ತಕದಲ್ಲಿ ರಾಹುಲ್ ಗಾಂಧಿ ಅವರ ಮಾನಸಿಕತೆ, ಜನರ ಒಡನಾಟ, ವಿಭಿನ್ನ ಹೋರಾಟ. ಅದರಲ್ಲೂ, ಪ್ರಭಾವಿಗಳನ್ನು ಎದುರು ಹಾಕಿಕೊಂಡಿರುವ ಪರಿಯನ್ನು ವಿಶ್ಲೇಷಣೆ ಮಾಡಿದ್ದಾರೆ. ಹೀಗಾಗಿ, ಇದೊಂದು ಭಿನ್ನ ಪುಸ್ತಕಯೇ ಇರಲಿದೆ ಎಂದು ಅವರು ನುಡಿದರು.

ಹಿರಿಯ ನಟಿ ಹಾಗೂ ಸಾಹಿತಿ ಪದ್ಮಾವತಿ ರಾವ್​ ಮಾತನಾಡಿ, ನಾನು ಹಿಂದೂ ಆಗಿದ್ದೇನೆ‌.ಆದರೆ, ಎಂದೂ ಸಹ ಮೂಲಭೂತವಾದವನ್ನು ಬೆಂಬಲಿಸುವುದಿಲ್ಲ. ಜಾತ್ಯಾತೀತೆ, ಸಹಬಾಳ್ವೆವೇ ನನ್ನ ಹಾದಿಯಾಗಿದೆ ಎಂದು ಅಭಿಪ್ರಾಯಿಸಿದರು.

ರಾಹುಲ್ ಗಾಂಧಿಯವರ ರಾಜಕೀಯ ಮತ್ತು ಬಿಕ್ಕಟ್ಟುಗಳು, ಗೊಂದಲಗಳು ಮತ್ತು ವಿರೋಧಾಭಾಸಗಳು, ತುಂಟತನ ಮತ್ತು ಗೆಲುವು, ಜೊತೆಗೆ ಅವರ ಸೌಮ್ಯತೆಯನ್ನು ಅರ್ಥಮಾಡಿಕೊಳ್ಳುವ ನಿರೂಪಣೆಗಳು ಪುಸ್ತಕದಲ್ಲಿವೆ.

ಪುಸ್ತಕವು ಸಾರ್ವಜನಿಕವಾಗಿ ಅವರ ಸೂಕ್ತತೆ ಅಥವಾ ಸೂಕ್ತವಲ್ಲದ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುವುದಿಲ್ಲ. ಆದರೆ ಅವರು ಇತಿಹಾಸದ ಪ್ರವಾಹಗಳಲ್ಲಿ ಹೇಗೆ ಸಿಕ್ಕಿಬಿದ್ದಿದ್ದಾರೆ ಎಂಬುದನ್ನು ಕೇಂದ್ರೀಕರಿಸಿದೆ. ಇದು ಮಿಥ್ಯೆಯನ್ನು ಮುರಿಯುವ ಅಥವಾ ಮಿಥ್ಯೆಯನ್ನು ಸೃಷ್ಟಿಸುವ ಪ್ರಯತ್ನವಲ್ಲ, ಬದಲಾಗಿ ರಾಜಕೀಯ ಒಳನೋಟದ ಅನ್ವೇಷಣೆಯಾಗಿದೆ ಎಂದು ಅವರು ವಿಶ್ಲೇಷಣೆ ಮಾಡಿದರು.

ಇತಿಹಾಸಕಾರ ಹಾಗೂ ಮನಶಾಸ್ತ್ರಜ್ಞ ಡಾ. ಸಂಜೀವ್​ ಜೈನ್​ ಮಾತನಾಡಿ, ಈ ಪುಸ್ತಕವು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಇದೆ. ಹಾಗೆಂದು ಇದು ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ಕುರಿತಾಗಿಲ್ಲ. ಈ ಪುಸ್ತಕವು ಇಬ್ಬರು ವ್ಯಕ್ತಿಗಳು ಮತ್ತು ಅವರು ಪ್ರತಿನಿಧಿಸುವ ಎರಡು ಪಕ್ಷಗಳ ವೈರುಧ್ಯಗಳು ಮತ್ತು ಒಮ್ಮತದ ಕುರಿತಾಗಿವೆ ಎಂದರು.

ಈ ಸಂದರ್ಭದಲ್ಲಿ ಬರಹಗಾರ ಹಾಗೂ ಹೋರಾಟಗಾರ ಪ್ರೊ. ಜಿ.ಎನ್​.ದೇವಿ, ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಇದ್ದರು‌.

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News