ಅಧಿವೇಶನ | ಗದ್ದಲ ನಡುವೆ ಉಭಯ ಸದನಗಳಲ್ಲಿ 6 ವಿಧೇಯಕ ಅಂಗೀಕಾರ
ಬೆಂಗಳೂರು : ಮುಡಾ ಹಗರಣದ ಬಗ್ಗೆ ಸದನದಲ್ಲಿ ಬಿಜೆಪಿ-ಜೆಡಿಎಸ್ ಶಾಸಕರ ಗದ್ದಲದ ನಡುವೆ ವಿಧಾನಮಂಡಲ ಉಭಯ ಸದನಗಳಲ್ಲಿ 2024ನೆ ಸಾಲಿನ ಕರ್ನಾಟಕ ಪ್ರಾಚೀನ, ಐತಿಹಾಸಿಕ ಸ್ಮಾರಕಗಳು, ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ(ತಿದ್ದುಪಡಿ)ವಿಧೇಯಕ ಸಹಿತ 6 ವಿಧೇಯಕಗಳು ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರಗೊಂಡವು.
ಗುರುವಾರ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಶಾಸನ ರಚನಾ ಕಲಾಪದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕ ಮತ್ತು ಪುರಾತತ್ವ ಸ್ಥಳಗಳ ಸಂರಕ್ಷಣೆ ಮಾಡುವ ಕರ್ತವ್ಯವಿದೆ. ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲು ಈ ವಿಧೇಯಕ ಅವಕಾಶ ಮಾಡಿಕೊಡಲಿದೆ ಎಂದರು.
ಸೊಸೈಟಿ, ಸಹಕಾರ ಸಂಘಗಳು, ಟ್ರಸ್ಟ್ ಗಳು, ಸರ್ಕಾರೇತರ ಸಂಸ್ಥೆಗಳು ಆಸಕ್ತಿ ಉಳ್ಳ ವ್ಯಕ್ತಿಗಳನ್ನು ಸ್ಮಾರಕ ಪಟ್ಟಿಯಲ್ಲಿ ಸೇರಿಸುವುದಕ್ಕೆ ಅರ್ಹರಾಗಿಸುವುದಕ್ಕೆ ತಿದ್ದುಪಡಿ ತರಲಾಗಿದೆ ಎಂದು ಉಲ್ಲೇಖಿಸಿದರು. ನಂತರ ಸ್ಪೀಕರ್ ಖಾದರ್, 2024ನೆ ಸಾಲಿನ ಕರ್ನಾಟಕ ಪ್ರಾಚೀನ, ಐತಿಹಾಸಿಕ ಸ್ಮಾರಕಗಳು, ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ (ತಿದ್ದುಪಡಿ) ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಒಪ್ಪಿಗೆ ದೊರೆಯಿತು.
ಸಮಾಜಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಪರವಾಗಿ ಕಾನೂನು ಸಚಿವರು ಪರ್ಯಾಲೋಚಿಸಿದ 2024ನೆ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು, ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕಕ್ಕೂ ಸದನ ಒಪ್ಪಿಗೆ ನೀಡಿತು.
ವಿಧೇಯಕ ಕುರಿತು ಮಾತನಾಡಿದ ಎಚ್.ಕೆ.ಪಾಟೀಲ್ ಅವರು, ಹೊರಗುತ್ತಿಗೆಯಲ್ಲಿ ಸಾಮಾಜಿಕ ನ್ಯಾಯವಿರಲಿಲ್ಲ. ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ತಿದ್ದುಪಡಿ ತರಲಾಗಿದ್ದು, ಸದನ ಒಪ್ಪಿಗೆ ನೀಡಬೇಕೆಂದು ಇದಕ್ಕೂ ಮುನ್ನ ಕೋರಿದ್ದರು.
ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಂಡಿಸಿದ 2024ನೇ ಸಾವಲಿನ ಕರ್ನಾಟಕ ಭೂ ಕಂದಾಯ 2ನೇ ತಿದ್ದುಪಡಿ ವಿಧೇಯಕಕ್ಕೂ ಸದನದಲ್ಲಿ ಒಪ್ಪಿಗೆ ದೊರೆಯಿತು.
ಆರೋಗ್ಯ ದಿನೇಶ್ ಗುಂಡೂರಾವ್ ಮಂಡಿಸಿದ 2024ನೆ ಸಾಲಿನ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು ತಿದ್ದುಪಡಿ ವಿಧೇಯಕಕ್ಕೂ ಸದನ ಅಂಗೀಕಾರ ನೀಡಿತು. ಬಳಿಕ ತೋಟಗಾರಿಕಾ ಸಚಿವ ಮಲ್ಲಿಕಾರ್ಜುನ ಅವರ ಪರವಾಗಿ ಕಾನೂನು ಸಚಿವರು ಮಂಡಿಸಿದ 2024ನೆ ಸಾಲಿನ ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣಾ) (ತಿದ್ದುಪಡಿ) ವಿಧೇಯಕಕ್ಕೂ ಸದನದಲ್ಲಿ ಒಪ್ಪಿಗೆ ಪಡೆದುಕೊಳ್ಳಲಾಯಿತು.
ಅದೇ ರೀತಿ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಮಂಡಿಸಿದ 2024ನೆ ಸಾಲಿನ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೂ ಸದನದ ಒಪ್ಪಿಗೆ ಸಿಕ್ಕಿತು.
ವಿಧೇಯಕ ಕುರಿತು ಮಾತನಾಡಿದ ರಾಮಲಿಂಗಾರೆಡ್ಡಿ, ಯಲ್ಲಮ್ಮ ದೇವಾಲಯಕ್ಕೆ ಕರ್ನಾಟಕ, ಗೋವಾ, ಆಂಧ್ರ, ತೆಲಂಗಾಣದಿಂದ ವಾರ್ಷಿಕ 80 ಲಕ್ಷದಿಂದ 1 ಕೋಟಿ ಭಕ್ತರು ಬರುತ್ತಾರೆ. ಹೀಗಾಗಿ, ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಮತ್ತು ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ಸ್ವತಂತ್ರ ಶಾಸನದ ಪ್ರಾಧಿಕಾರದ ರಚನೆಗೆ ಉಪಂಧ ಕಲ್ಪಿಸಲು ಈ ವಿಧೇಯಕವನ್ನು ತರಲಾಗಿದೆ. ರಾಜ್ಯಮಟ್ಟದಲ್ಲಿ ಒಂದು ಸಮಿತಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇನ್ನೊಂದು ಸಮಿತಿ ಕಾರ್ಯ ನಿರ್ವಹಿಸಲಿದೆ. ಆ ಮೂಲಕ ದೇವಸ್ಥಾನದ ಅಭಿವೃದಿಗೆ ಅನುಕೂಲವಾಗಲಿದೆ ಎಂದು ಸದನಕ್ಕೆ ತಿಳಿಸಿದರು.