ಲೈಂಗಿಕ ಹಗರಣ | ಪ್ರಜ್ವಲ್ ರೇವಣ್ಣ ಬ್ಯಾಂಕ್ ವಹಿವಾಟು ಸ್ಥಗಿತ ಸಾಧ್ಯತೆ

Update: 2024-05-19 17:34 GMT

ಬೆಂಗಳೂರು : ಲೈಂಗಿಕ ಹಗರಣ ಪ್ರಕರಣ ಸಂಬಂಧ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪತ್ತೆಗೆ ಎಸ್‌ಐಟಿ ತನಿಖಾಧಿಕಾರಿಗಳು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಇದೀಗ ಅವರ ಬ್ಯಾಂಕ್ ಖಾತೆಗಳ ವಹಿವಾಟು ಪ್ರಕ್ರಿಯೆ ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಖಾತೆಗೆ ಆನ್‍ಲೈನ್ ಮೂಲಕ ನಗದು ವರ್ಗಾವಣೆಯಾಗಿದೆ ಎನ್ನುವ ಮಾಹಿತಿ ಎಸ್‌ಐಟಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದ್ದು, ಅದರಂತೆ ನಗದು ವರ್ಗಾವಣೆಯಾಗದಂತೆ ತಡೆಯಲು  ಅಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಪ್ರಜ್ವಲ್ ರೇವಣ್ಣ ಅವರ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಲು ಸಿದ್ಧತೆ ನಡೆಸಿದ್ದಾರೆ.

ಇನ್ನೊಂದೆಡೆ, ಪ್ರಜ್ವಲ್ ರೇವಣ್ಣ ತಮ್ಮ ರಾಜತಾಂತ್ರಿಕ ಪಾಸ್‍  ಪೋರ್ಟ್ ಬಳಸಿ ವಿದೇಶಕ್ಕೆ ತೆರಳಿದ್ದಾರೆ. ಹೀಗಾಗಿ ಪಾಸ್ ಪೋರ್ಟ್ ರದ್ದಾದರೆ ಕೂಡಲೇ ಅವರು ಸ್ವದೇಶಕ್ಕೆ ಮರಳಬೇಕಾಗುತ್ತದೆ. ಈಗ ನ್ಯಾಯಾಲಯದ ಬಂಧನ ವಾರಂಟ್ ಆಧರಿಸಿ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಎಸ್‌ಐಟಿ ಪತ್ರ ಬರೆಯಲಿದೆ ಎಂದು ಮೂಲಗಳು ತಿಳಿಸಿವೆ.

ವಾರೆಂಟ್: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿರುವ ಹಿನ್ನೆಲೆ ಎಸ್‌ಐಟಿ ತನಿಖಾಧಿಕಾರಿಗಳು ಪತ್ತೆಗೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.

ಮನೆಯ ಮಹಿಳಾ ಕೆಲಸದಾಳುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಹೊಳೆನರಸೀಪುರ ಠಾಣೆಯಲ್ಲಿ ಪ್ರಜ್ವಲ್ ಹಾಗೂ ಅವರ ತಂದೆ ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕೃತ್ಯದ ಸಂತ್ರಸ್ತೆ ಹೇಳಿಕೆ ಆಧರಿಸಿ ಪ್ರಜ್ವಲ್ ರೇವಣ್ಣ ಅವರ ಮೇಲೆ 376 ರಡಿ (ಅತ್ಯಾಚಾರ) ಸೆಕ್ಷನ್ ಅನ್ನು ಸಹ ಎಸ್‌ಐಟಿ ಸೇರಿಸಿತ್ತು. ಇದಾದ ಬಳಿಕ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿದ್ದರೂ, ಪ್ರಜ್ವಲ್ ರೇವಣ್ಣ ಈವರೆಗೂ ವಿಚಾರಣೆಗೆ ಹಾಜರಾಗಿಲ್ಲ.

ಪ್ರಕರಣಕ್ಕೆ ಪೂರಕವಾಗಿ ಕೆಲ ದಾಖಲೆಗಳನ್ನು ಸಂಗ್ರಹಿಸಿ ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸಿತು. ಈ ಪ್ರಕರಣ ಸಂಬಂಧ ವಿದೇಶದಲ್ಲಿರುವ ಪ್ರಜ್ವಲ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸುವಂತೆ ನ್ಯಾಯಾಲಯಕ್ಕೆ ಎಸ್‌ಐಟಿ ಅಧಿಕಾರಿಗಳು ಮನವಿ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News