ಲೈಂಗಿಕ ಹಗರಣ | ವಿದೇಶಾಂಗ ಸಚಿವಾಲಯದಿಂದ ಪ್ರಜ್ವಲ್ ರೇವಣ್ಣಗೆ ಶೋಕಾಸ್ ನೋಟಿಸ್
ಬೆಂಗಳೂರು : ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿರುವ ಪ್ರಜ್ವಲ್ ಪಾಸ್ ಪೋರ್ಟ್ ರದ್ದು ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಈ ಸಂಬಂಧ ವಿದೇಶಾಂಗ ಸಚಿವಾಲಯ ಆರೋಪಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
ಶೋಕಾಸ್ ನೋಟಿಸ್ ಜಾರಿ ಸಂಬಂಧ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು, ಪ್ರಜ್ವಲ್ ರೇವಣ್ಣ ಅವರ ಪಾಸ್ ಪೋರ್ಟ್ ರದ್ದು ಮಾಡಬೇಕೆಂಬ ರಾಜ್ಯ ಸರಕಾರ ಹಾಗೂ ಎಸ್‌ಐಟಿ ತನಿಖಾ ಸಂಸ್ಥೆಯ ಮನವಿ ಹಿನ್ನೆಲೆಯಲ್ಲಿ ವಿದೇಶಾಂಗ ಇಲಾಖೆಯಿಂದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮಾಹಿತಿ ಬಂದಿದೆ: ಇನ್ನೂ, ಈ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ, ಪ್ರಜ್ವಲ್ ರೇವಣ್ಣ ಅವರ ಪಾಸ್ ಪೋರ್ಟ್ ರದ್ದುಗೊಳಿಸುವ ಕುರಿತು ನಾವು ಬರೆದ ಪತ್ರಕ್ಕೆ ಕೇಂದ್ರ ಸರಕಾರದಿಂದ ಈವರೆಗೂ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಇಂದು ಪಾಸ್ ಪೋರ್ಟ್ ರದ್ದುಗೊಳಿಸಲು ಪ್ರಕ್ರಿಯೆ ಆರಂಭಿಸಿದ್ದಾರೆಂಬ ಮಾಹಿತಿ ಬಂದಿದೆ ಎಂದರು.
ತನಿಖಾಯಲ್ಲಿ ದೋಷಗಳಿದ್ದರೆ ಅದನ್ನು ಹೇಳಲಿ:
ಪ್ರಜ್ವಲ್ ಎಲ್ಲಿದ್ದಾನೆ ಎಂಬುದು ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತು ಎಂದು ಜೆಡಿಎಸ್ ಟ್ವೀಟ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಟ್ವೀಟ್‍ಗಳಿಗೆ ಉತ್ತರ ಕೊಡುವುದೇ ನನ್ನ ಕೆಲಸವಲ್ಲ. ಕಾನೂನಿನ ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತೇವೆ. ಅದರಲ್ಲಿ ತಪ್ಪಿದ್ದರೆ ಹೇಳಲಿ. ಎಸ್‌ಐಟಿ ತನಿಖಾಯಲ್ಲಿ ದೋಷಗಳಿದ್ದರೆ ಅದನ್ನು ಹೇಳಲಿ. ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ. ಸುಮ್ಮನೆ ಅವರೊಂದು ಟ್ವೀಟ್, ಇವರೊಂದು ಟ್ವೀಟ್ ಮಾಡುವುದಕ್ಕೆಲ್ಲ ಉತ್ತರ ಕೊಡಲು ಆಗುವುದಿಲ್ಲ ಎಂದು ಹೇಳಿದರು.
ಇವರೇನು ಕತ್ತೆ ಕಾಯುತ್ತಿದ್ದರಾ?: ‘ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಹೊರಬಂದಿದ್ದು, ಎಪ್ರಿಲ್ 21ರಂದು. ಅವರು ವಿದೇಶಕ್ಕೆ ಹೋಗಿದ್ದು ಎ.27ರಂದು. ಹಾಗಾದರೆ ಅಲ್ಲಿಯವರೆಗೆ ಇವರೇನು ಕತ್ತೆ ಕಾಯುತ್ತಿದ್ದರಾ?. ಪಾಸ್ ಪೋರ್ಟ್ ರದ್ದುಪಡಿಸಲು ಅದರದೇ ಆದ ಪ್ರಕ್ರಿಯೆಗಳಿವೆ. ಕೇಂದ್ರ ಸರಕಾರ ಕಾನೂನು ಪ್ರಕಾರ ಏನು ಮಾಡಬೇಕೋ ಮಾಡುತ್ತಿದೆ. ರಾಜ್ಯ ಸರಕಾರಕ್ಕೆ ಸಹಕಾರ ನೀಡಲು ತಯಾರಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.