ಬೆಳಗಾವಿಯಲ್ಲಿ 250 ಕೋಟಿ ರೂ.ಹೂಡಿಕೆಗೆ ಎಸ್‍ಎಫ್‍ಎಸ್ ಕಂಪೆನಿ ಪ್ರಸ್ತಾವ: ಸಚಿವ ಎಂ.ಬಿ.ಪಾಟೀಲ್

Update: 2023-06-28 17:41 GMT

ಬೆಂಗಳೂರು, ಜೂ.28: ಆಪಲ್ ಫೋನ್ ತಯಾರಿಸುವ ಫಾಕ್ಸ್‌ಕಾನ್‌ ಕಂಪೆನಿಗೆ ಬಿಡಿಭಾಗಗಳನ್ನು ತಯಾರಿಸಿ ಕೊಡುವ ಎಸ್‍ಎಫ್‍ಎಸ್ ಕಂಪೆನಿಯು ಬೆಳಗಾವಿಯಲ್ಲಿ 250 ಕೋಟಿ ರೂ.ಬಂಡವಾಳ ಹೂಡಲು ಮುಂದೆ ಬಂದಿದ್ದು, ಇದಕ್ಕಾಗಿ 30 ಎಕರೆ ಭೂಮಿಯನ್ನು ಕೇಳಿದೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಬುಧವಾರ ಭೇಟಿಯಾಗಿದ್ದ ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ಫಾರಸ್ ಶಾ ನೇತೃತ್ವದ ನಿಯೋಗದ ಬೇಡಿಕೆಗಳನ್ನು ಕೇಳಿದ ಅವರು, ಎಸ್‍ಎಫ್‍ಎಸ್ ಕಂಪೆನಿ ಈಗಾಗಲೆ ಬೆಳಗಾವಿಯಲ್ಲಿ ಏರೋಸ್ಪೇಸ್ ಉದ್ಯಮಕ್ಕೆ ಬೇಕಾಗುವ ಬಿಡಿಭಾಗಗಳನ್ನು ತಯಾರಿಸುತ್ತಿದೆ. ಈಗ ಅದು ಆಪಲ್ ಫೆÇೀನ್‍ಗೆ ಬೇಕಾಗುವ ಬಿಡಿಭಾಗಗಳ ತಯಾರಿಕಾ ಘಟಕವನ್ನು ರಾಜ್ಯದಲ್ಲಿ ತೆರೆಯಲು ಮನಸ್ಸು ಮಾಡಿದೆ ಎಂದರು.

ಇದರಿಂದ ಮುಂದಿನ ಮೂರು ವರ್ಷಗಳಲ್ಲಿ 500 ಜನ ತಂತ್ರಜ್ಞರಿಗೆ ಉದ್ಯೋಗ ಸಿಗಲಿದೆ ಎಂದು ಕಂಪೆನಿಯ ಪ್ರತಿನಿಧಿಗಳು ತಿಳಿಸಿದ್ದಾರೆ. ಇದರ ಜತೆಗೆ ಪರೋಕ್ಷವಾಗಿ ನೂರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದ ರಾಜ್ಯದ ಆರ್ಥಿಕತೆಗೂ ಲಾಭವಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಬೆಳಗಾವಿಯನ್ನು ರಾಜ್ಯದ ಪ್ರಮುಖ ಉದ್ಯಮ ವಲಯಗಳಲ್ಲಿ ಒಂದಾಗಿ ಬೆಳೆಸಲಾಗುತ್ತಿದೆ. ಅಲ್ಲಿ ಸಂಪರ್ಕ ವ್ಯವಸ್ಥೆ ಚೆನ್ನಾಗಿದೆ. ಇದು ಮುಂಬೈ-ಬೆಂಗಳೂರು-ಚೆನ್ನೈ ಕಾರಿಡಾರ್‍ನಲ್ಲಿ ಬರುವುದರಿಂದ ಔದ್ಯಮಿಕ ಬೆಳವಣಿಗೆಗೆ ಅಪಾರ ಅವಕಾಶಗಳಿವೆ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರಕಾರವು ತೀರ್ಮಾನಿಸಿದೆ ಎಂದು ಅವರು ನುಡಿದರು. ಈ ಸಂದರ್ಭದಲ್ಲಿ ಎಸ್‍ಎಫ್‍ಎಸ್ ಕಂಪೆನಿಯ ನಿರ್ದೇಶಕ ಪ್ರಶಾಂತ್ ಕೋರೆ, ಕೈಗಾರಿಕಾ ಇಲಾಖೆ ಅಯುಕ್ತೆ ಗುಂಜನ್ ಕೃಷ್ಣ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News