ರೇಟ್ ಫಿಕ್ಸ್, ಬ್ಲ್ಯಾಕ್‌ಮೇಲ್‌ ಮಾಡುವುದು ಕುಮಾರಸ್ವಾಮಿ ಗುಣ: ಡಿ.ಕೆ. ಶಿವಕುಮಾರ್ ವಾಗ್ದಾಳಿ

Shivakumar slams Kumaraswamy

Update: 2024-04-15 13:25 GMT

ಬೆಳಗಾವಿ: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಯಾವ ರೇಟು, ಎಂತಹ ರೇಟು ಎಂದು ಹೇಳಬೇಕು. ಕುಮಾರಣ್ಣ, ರೇಟ್ ಫಿಕ್ಸ್ ಮಾಡುವ ಚಾಳಿ ನಿನಗೆ ಇರಬೇಕು. ಅದನ್ನು ಬೇರೆಯವರ ಮೇಲೆ ಹಾಕುತ್ತಿದ್ದೀರಾ. ನಾವು ರಾಜ್ಯದ ಮಹಿಳೆಯರು ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ನೀಡಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅವನಿಗೆ ಪಿಕ್ ಪಾಕೇಟ್ ಮಾಡಿ ರೂಢಿ ಅಲ್ಲವೇ? ಹೆದರಿಸಿ, ಬೆದರಿಸಿ ಬ್ಲಾಕ್‍ಮೇಲ್ ಮಾಡುವುದು, ಹಿಟ್ ಅಂಡ್ ರನ್ ಮಾಡುವುದು ಅವನ ಕೆಲಸ. ಮಹಿಳೆಯರು ತಿರುಗಿ ಬಿದ್ದಿರುವ ಕಾರಣ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸುತ್ತಿದ್ದು ನನ್ನ ವಿರುದ್ಧ ಟೀಕಿಸುತ್ತಿದ್ದಾರೆ. ಹೆದರಿಕೊಂಡು ಪಕ್ಕದ ಜಿಲ್ಲೆಗೆ ಹೋಗಿರುವ ಮಿಸ್ಟರ್ ಕುಮಾರಸ್ವಾಮಿ, ನೀನು ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು.

‘ಕಾಂಗ್ರೆಸ್‍ನವರು ದೇವೇಗೌಡರನ್ನ ಅಧಿಕಾರದಿಂದ ಇಳಿಸಿದ್ದು, ಇದಕ್ಕೆ ಸಿದ್ದರಾಮಯ್ಯ ಉತ್ತರ ಕೊಡಬೇಕೆಂದು ಎಚ್‍ಡಿಕೆ ಕೇಳಿದ್ದಾರೆ. ಆದರೆ, ಅವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿದ್ದೇ ಕಾಂಗ್ರೆಸ್. ಅವರ ಎಲ್ಲ ಆರೋಪಗಳಿಗೆ ಉತ್ತರಿಸುತ್ತೇನೆ. ಅವರಿಗೆ ಸದನಕ್ಕೆ ಬರಲು ಹೇಳಿ ಎಂದು ಶಿವಕುಮಾರ್ ಸವಾಲು ಹಾಕಿದರು.

‘ಮುಂದಿನ ಜನಾಂಗ ನೀವು ಎಂತಹ ಸುಳ್ಳುಗಾರ ಎಂದು ನೋಡಬೇಕು. ಯಾವುದೇ ಆರೋಪಕ್ಕೂ ದಾಖಲೆ ಇರಬೇಕಲ್ಲವೇ? ಹೀಗಾಗಿ ನನ್ನ ಆಸ್ತಿ, ಅವರ ಆಸ್ತಿ ಬಗ್ಗೆ ಸದನದಲ್ಲಿ ಚರ್ಚಿಸಲು ನಾನು ಆಹ್ವಾನ ನೀಡಿದ್ದೆ. ಆತ(ಎಚ್‍ಡಿಕೆ) ಸದನಕ್ಕೇ ಬರಲಿಲ್ಲ. ಅವರ ಕುಟುಂಬದ ಎಲ್ಲ ಸದಸ್ಯರ ಆಸ್ತಿ ಬೆಂಗಳೂರು ಸುತ್ತಾಮುತ್ತಾ ಎಷ್ಟಿತ್ತು ಎಂದು ನಾನು ದಾಖಲೆಗಳನ್ನು ತರುತ್ತೇನೆ. ನಾನು ಕಲ್ಲು ಹೊಡೆದಿದ್ದೇನೆಯೇ, ಲೂಟಿ ಮಾಡಿದ್ದೇನೆಯೇ ಎಂಬುದು ಸದನದಲ್ಲಿ ತೀರ್ಮಾನವಾಗಲಿ. ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುವುದರಲ್ಲಿ ಪ್ರಸಿದ್ಧಿ’ ಎಂದು ಟೀಕಿಸಿದರು.

ದಾರಿತಪ್ಪುತ್ತಿದ್ದಾರೆ ಎಂದರೆ ಏನರ್ಥ?: ‘ಮಹಿಳೆಯರಿಗೆ ಒಳ್ಳೆಯದಾಗಲಿ ಎಂದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ನಮ್ಮ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದರೆ ಏನರ್ಥ? ಇದು ರಾಜ್ಯದ ಮಹಿಳೆಯರ ಸ್ವಾಭಿಮಾನದ ಪ್ರಶ್ನೆ. ಕುಮಾರಸ್ವಾಮಿ ಹೇಳಿಕೆ ರಾಜ್ಯಕ್ಕೆ ಕಪ್ಪುಚುಕ್ಕೆ. ಈ ಹೇಳಿಕೆಯ ವಿರುದ್ಧ ಪಕ್ಷ ಬೇಧ ಮರೆತು ಎಲ್ಲ ಮಹಿಳಾ ಸಂಘಟನೆಗಳು ಹೋರಾಟ ಮಾಡಬೇಕು. ಹಗುರವಾಗಿ ಮಾತನಾಡುವುದರ ಬಗ್ಗೆ ಪ್ರತಿರೋಧ ಮಾಡಬೇಕು. ಎನ್‍ಡಿಎ ಮೈತ್ರಿಗೆ ಬುದ್ಧಿ ಕಲಿಸಬೇಕು ಎಂದು ಶಿವಕುಮಾರ್ ನುಡಿದರು.

ಈ ವಿಚಾರದಲ್ಲಿ ಕುಮಾರಸ್ವಾಮಿ ಕ್ಷಮಾಪಣೆ, ವಿಷಾಧ ಯಾವುದೂ ಬೇಕಾಗಿಲ್ಲ. ಕೊಲೆ ಮಾಡಿ, ಹಲ್ಲೆ ನಡೆಸಿ ಕ್ಷಮಾಪಣೆ ಕೇಳಿದರೆ ಆಗುತ್ತದೆಯೇ?  ಬಿಜೆಪಿ ಮತ್ತು ಜೆಡಿಎಸ್ ಮಹಿಳಾ ಕಾರ್ಯಕರ್ತರಿಗೆ ಗ್ಯಾರಂಟಿ ಯೋಜನೆ ಲಾಭ ತಿರಸ್ಕಿರಿಸಲು ಕರೆ ನೀಡಲಿ. ಅವರಿಂದ ಕೇವಲ ಐದು ಜನರ ಕೈಯಲ್ಲಿ ಗ್ಯಾರಂಟಿಗಳನ್ನು ಹಿಂಪಡೆಯುವಂತೆ ಮಾಡಿಸಲು ಆಗುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ಬಿಜೆಪಿ ಪ್ರಣಾಳಿಕೆಗೆ ಬೆಲೆ ಇಲ್ಲ: ಬಿಜೆಪಿ ಪ್ರಣಾಳಿಕೆಗೆ ಮಹತ್ವವೇ ಇಲ್ಲ. ನಾವು ಹಾಗೂ ಜನರು ಕೇಳುವ ಪ್ರಶ್ನೆಗಳಿಗೆ ಪ್ರಧಾನಿ, ಬಿಜೆಪಿ ರಾಷ್ಟ್ರಿಯಾಧ್ಯಕ್ಷ ನಡ್ಡಾ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರು ಉತ್ತರಿಸಬೇಕು. ಪ್ರಧಾನಿ ಮೋದಿ ಸ್ವಿಸ್ ಬ್ಯಾಂಕ್ ಅಲ್ಲಿ ಇರುವ ಕಪ್ಪು ಹಣ ತಂದು ಜನರ ಖಾತೆಗೆ 15 ಲಕ್ಷ ರೂ.ಹಣ ಕೊಡುತ್ತೇವೆ ಎಂದು ಹೇಳಿದರು. ಕೊಟ್ಟ ಮಾತಿನಂತೆಯೇ ನಡೆದುಕೊಂಡಿದ್ದಾರೆಯೇ? ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು ಮಾಡಿದ್ದಾರೆಯೇ? ಯಾವ ರೈತರ ಆದಾಯ ಡಬಲ್ ಮಾಡಿದ್ದಾರೆ?’ ಎಂದು ಅವರು ಪ್ರಶ್ನೆ ಮಾಡಿದರು.

ಡೆತ್ ಸರ್ಟಿಫಿಕೆಟ್‍ನಲ್ಲಿ ಮೋದಿ ಫೋಟೊ ಏಕೆ ಹಾಕಲಿಲ್ಲ: ಕೋವಿಡ್ ಸಂದರ್ಭದಲ್ಲಿ ಎಲ್ಲ ಸರ್ಟಿಫಿಕೆಟ್‍ಗಳಿಗೆ ಮೋದಿ ಫೋಟೊ ಹಾಕಲಾಗಿತ್ತು. ಡೆತ್ ಸರ್ಟಿಫಿಕೆಟ್‍ಗೆ ಮಾತ್ರ ಏಕೆ ಮೋದಿ ಫೋಟೊ ಹಾಕಲಿಲ್ಲ. ಬೆಳಗಾವಿಯ ಸಂಸದರಾಗಿದ್ದ ಸುರೇಶ್ ಅಂಗಡಿ ಅವರಂತಹ ಸಜ್ಜನರ ಮೃತದೇಹವನ್ನು ಕ್ಷೇತ್ರದ ಜನರು ನೋಡುವುದಕ್ಕೂ ಬಿಡಲಿಲ್ಲ. ಜೆಸಿಬಿ ಮೂಲಕ ಅವರ ದೇಹವನ್ನು ತಳ್ಳಲಾಯಿತು ಎಂದು ಅವರು ವಾಗ್ದಾಳಿ ನಡೆಸಿದರು.

ಬೀಗ ತೆಗೆಸದಿದ್ದರೆ ಪೂಜೆ ಮಾಡಲು ಆಗುತ್ತಿತ್ತೇ?: ಬಿಜೆಪಿಯವರು ಮಾತೆತ್ತಿದರೇ ದೇವಸ್ಥಾನ ಎನ್ನುತ್ತಾರೆ. ರಾಜೀವ್ ಗಾಂಧಿ ಅವರು ಬೀಗ ತೆಗೆಸದೇ ಇದ್ದರೆ, ಇವರು ಎಲ್ಲಿ ಪೂಜೆ ಮಾಡುತ್ತಿದ್ದರು? ದೇಶದಲ್ಲಿ ನಿಮ್ಮ ಗಾಳಿ ಎಲ್ಲಿದೆ. ಇರುವುದು ಗ್ಯಾರಂಟಿ ಮತ್ತು ಅಭಿವೃದ್ಧಿಯ ಗಾಳಿ ಮಾತ್ರ. ಎಲ್ಲ ಮಹಿಳೆಯರು ಪುಣ್ಯಕ್ಷೇತ್ರಗಳಿಗೆ, ತವರುಮನೆಗೆ, ಕೆಲಸಕ್ಕೆ ಹೋಗುತ್ತಿದ್ದಾರೆ. ಇದರ ವಿರುದ್ಧ ಅವರ ದೋಸ್ತಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.

‘ಬಿಜೆಪಿ ನಡೆಸಿದ ಸಮೀಕ್ಷೆಯಲ್ಲೇ ಬಿಜೆಪಿ ಗೆಲ್ಲುವುದಿಲ್ಲ ಎಂದು ವರದಿ ಬಂದಿದೆ. ಬಿಜೆಪಿ ಸಂಸದರು ಉತ್ತಮವಾಗಿ ಕೆಲಸ ಮಾಡಿದ್ದರೆ 14 ಜನ ಅಭ್ಯರ್ಥಿಗಳನ್ನು ಬದಲಿಸಿದ್ದೇಕೆ? ಸದಾನಂದ ಗೌಡ, ಪ್ರತಾಪ್ ಸಿಂಹ, ಕರಡಿ ಸಂಗಣ್ಣ, ಶ್ರೀನಿವಾಸ್ ಪ್ರಸಾದ್, ನಳಿನ್ ಕುಮಾರ್ ಕಟೀಲ್ ಅವರಿಗೆ ಏಕೆ ಕೊಡಲಿಲ್ಲ? ಶೋಭಕ್ಕ ಅವರಿಗೆ ಗೋ ಬ್ಯಾಕ್ ಎಂದು ಏಕೆ ಕಳುಹಿಸಲಾಯಿತು?’

-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News