ನಿಮ್ಮ ಅಣ್ಣ ರೇವಣ್ಣ ಅವರಿಂದಾದರೂ ಒಂದಿಷ್ಟು ರಾಜಕೀಯ ನಡವಳಿಕೆಯನ್ನು ಕಲಿಯಬಾರದಾ?: ಎಚ್ ಡಿಕೆಗೆ ಸಿಎಂ ತಿರುಗೇಟು

Update: 2023-11-18 08:02 GMT

ಬೆಂಗಳೂರು: ''ಒಬ್ಬ ಜವಾಬ್ದಾರಿಯುತ ರಾಜಕೀಯ ನಾಯಕನಾಗಿ ಕುಮಾರಸ್ವಾಮಿಯವರು ವಿಶ್ವಾಸಾರ್ಹ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಬೇಕೇ ಹೊರತು ತಾವೇ ಸೃಷ್ಟಿಸಿರುವ ಸುಳ್ಳಿನ ಕಂತೆಗಳನ್ನಲ್ಲ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

ತಮ್ಮ ಪುತ್ರ ಡಾ.ಯತೀಂದ್ರ ವಿರುದ್ಧ ಕುಮಾರಸ್ವಾಮಿಯವರ ಆರೋಪಗಳ ಕುರಿತು ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ,  ''ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜೊತೆಗೆ ರಾಜಕೀಯವಾಗಿ ನನಗೆ ಭಿನ್ನಾಭಿಪ್ರಾಯಗಳಿವೆ. ಆದರೆ ಅವರೆಂದೂ ಈ ರೀತಿಯ ಸಡಿಲ ಮಾತುಗಳನ್ನು ಆಡಿಲ್ಲ. ಕುಮಾರಸ್ವಾಮಿಯವರು ಕನಿಷ್ಠ ಅವರ ಅಣ್ಣ ಹೆಚ್.ಡಿ.ರೇವಣ್ಣ ಅವರಿಂದಾದರೂ ಒಂದಿಷ್ಟು ರಾಜಕೀಯ ನಡವಳಿಕೆಯನ್ನು ಕಲಿಯಬಾರದಾ?'' ಎಂದು ಪ್ರಶ್ನೆ ಮಾಡಿದ್ದಾರೆ. 

''ಡಾ.ಯತೀಂದ್ರ ವಿರುದ್ದ ತಾನು ಮಾಡಿರುವ ಆರೋಪ ಸುಳ್ಳು ಎನ್ನುವುದು ಹೆಚ್.ಡಿ.ಕುಮಾರಸ್ವಾಮಿವಯರಿಗೆ ಖಂಡಿತ ಮನವರಿಕೆ ಆಗಿದೆ. ಈಗಲೂ ಕಾಲ ಮಿಂಚಿಲ್ಲ. ತಪ್ಪನ್ನು ಒಪ್ಪಿಕೊಂಡರೆ ಯಾರೂ ಸಣ್ಣವರಾಗುವುದಿಲ್ಲ. ಒಂದು ಸುಳ್ಳನ್ನು ಸಮರ್ಥಿಸಲು ನೂರು ಸುಳ್ಳುಗಳನ್ನು ಹೇಳುವುದರ ಬದಲಿಗೆ ಮಾಡಿದ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳುವುದು ಉತ್ತಮ ನಡೆ. ಆ ಸದ್ಬುದ್ದಿ ಅವರಿಗೆ ಬರಲಿ ಎಂದು ಹಾರೈಸುತ್ತೇನೆ'' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News