ಕೋಟಿಗಾನಹಳ್ಳಿ ಸೇರಿದಂತೆ ಆರು ಮಂದಿಗೆ ‘ಸಿದ್ದಲಿಂಗಯ್ಯ ದತ್ತಿ ಪ್ರಶಸ್ತಿ’ ಪ್ರಕಟ
ಬೆಂಗಳೂರು: ಕಸಾಪವತಿಯಿಂದ ನೀಡುವ ‘ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಸೇರಿದಂತೆ ಆರು ಮಂದಿಯನ್ನು ಆಯ್ಕೆ ಮಾಡಲಾಗಿದೆ. ದಲಿತ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತ್ಯ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಹಿಂದಿನ ಆರು ವರ್ಷಗಳಿಂದ ಈ ಪ್ರಶಸ್ತಿಯನ್ನು ಪ್ರದಾನ ಮಾಡದೇ ಇರುವುದರಿಂದ ಈ ಬಾರಿ 6 ಜನ ಸಾಧಕರಿಗೆ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಪ್ರಶಸ್ತಿಯು 10ಸಾವಿರ ರೂ. ನಗದು, ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನೂ ಒಳಗೊಂಡಿರುತ್ತದೆ.
2018ನೆ ಸಾಲಿನ ‘ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ’ ಪ್ರಶಸ್ತಿಗಾಗಿ ದಲಿತ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೋಲಾರದ ಕೋಟಿಗಾನಹಳ್ಳಿ ರಾಮಯ್ಯ, 2019ನೆ ಸಾಲಿನ ಪ್ರಶಸ್ತಿಗೆ ಕಲಬುರಗಿಯ ಡಾ. ಎಚ್.ಟಿ. ಪೋತೆ, 2020ನೆ ಸಾಲಿನ ಪ್ರಶಸ್ತಿಗಾಗಿ ವಿಜಯಪುರದ ಇಂದುಮತಿ ಲಮಾಣಿ, 2021ನೆ ಸಾಲಿನ ಪ್ರಶಸ್ತಿಗೆ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ, 2022ನೆ ಸಾಲಿನ ಪ್ರಶಸ್ತಿಗೆ ಗದಗದ ಡಾ. ಅರ್ಜುನ ಗೊಳಸಂಗಿ ಹಾಗೂ 2023ನೆ ಸಾಲಿನ ಪ್ರಶಸ್ತಿಯನ್ನು ಹಾಸನದ ನಾಗರಾಜ ಹೆತ್ತೂರು ಅವರನ್ನು ಆಯ್ಕೆ ಮಾಡಲಾಗಿದೆ.
ಶ್ರವಣಬೆಳಗೊಳದಲ್ಲಿ ನಡೆದ 81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪಿಗಾಗಿ ಆ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ʻಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ನಿಧಿಯನ್ನು ಸ್ಥಾಪಿಸಿದೆ. ದಲಿತ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಬೇಕು ಎನ್ನುವುದು ದತ್ತಿಯ ಮೂಲ ಆಶಯವಾಗಿದೆ.
ಕೊರೋನಾ ಸೇರಿದಂತೆ ಇತರ ಕಾರಣಗಳ ಹಿನ್ನೆಲೆಯಲ್ಲಿ ಕಳೆದ 6 ವರ್ಷಗಳಿಂದ ‘ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ’ ಪ್ರಶಸ್ತಿಯ ಪ್ರಕಟಣೆ ಬಾಕಿ ಇತ್ತು. ಈಗ ಸಾಧಕರನ್ನು ಆಯಕೆ ಮಾಡಲಾಗಿದೆ ಎಂದು ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.