ಬಿಜೆಪಿ ನಾಯಕರೇ, ನಮ್ಮ ಕೈಗೆ ಬಡಿಗೆ ಕೊಟ್ಟು ಮತ್ತೆ ಮತ್ತೆ ಯಾಕೆ ಬಡಿಸಿಕೊಳ್ಳುತ್ತೀರಿ? : ಸಿಎಂ ಸಿದ್ದರಾಮಯ್ಯ

Update: 2024-05-08 12:52 GMT

ಬೆಂಗಳೂರು : ‌ ಬಿಜೆಪಿ ನಾಯಕರೇ, ನಮ್ಮ ಕೈಗೆ ಬಡಿಗೆ ಕೊಟ್ಟು ಮತ್ತೆ ಮತ್ತೆ ಯಾಕೆ ಬಡಿಸಿಕೊಳ್ಳುತ್ತೀರಿ?. ನಿಮ್ಮ ಸುಳ್ಳುಗಳನ್ನು ಬಯಲು ಮಾಡಲು ಅವಕಾಶ ಕೊಟ್ಟು ಸಮಾಜದ ಎದುರು ಯಾಕೆ ಬೆತ್ತಲಾಗುತ್ತೀರಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಎಕ್ಸ್‌ ನಲ್ಲಿ ಪೋಸ್ಟ್‌ ವೊಂದನ್ನು ಹಂಚಿಕೊಂಡಿರುವ ಅವರು, ಕಾಂಗ್ರೆಸ್ ಸರ್ಕಾರ ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮೋತ್ಸವ ಸಮಿತಿಗೆ ಮುಸ್ಲಿಂ ಸಮುದಾಯದ ನವಾಝ್ ಅವರನ್ನು ಸದಸ್ಯರನ್ನಾಗಿ ಮಾಡಿದೆ ಎಂದು ಎದೆಬಡಿದುಕೊಳ್ಳೀರಲ್ಲಾ?. ನಿಮ್ಮದೇ ಪಕ್ಷದ ಸರ್ಕಾರ 2020 ಮತ್ತು 2022ರ ಸಾಲಿನಲ್ಲಿ ಇದೇ ಬ್ರಹ್ಮೋತ್ಸವ ಸಮಿತಿಗೆ ಮುಸ್ಲಿಂ ಸಮುದಾಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಿದಾಗ ನಿಮ್ಮಲ್ಲಿ ಈಗ ಉಕ್ಕಿ ಹರಿಯುತ್ತಿರುವ ಹಿಂದುತ್ವದ ಅಭಿಮಾನ ಆಗ ಎಲ್ಲಿ ಅಡಗಿ ಕೂತಿತ್ತು?" ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

"ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನ ಸರ್ವಧರ್ಮಗಳನ್ನು ಸಮಭಾವದಿಂದ ಕಾಣುವ ಹಿಂದು ಧರ್ಮದ ಪರಂಪರೆಗೆ ಸಾಕ್ಷಿಯಾಗಿದೆ. ಅಲ್ಲಿನ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಎಲ್ಲ ಧರ್ಮಗಳ ಜನತೆ ಭಕ್ತಿ-ಗೌರವದಿಂದ ಭಾಗವಹಿಸುತ್ತಾರೆ. 2020ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಈ ದೇವಸ್ಥಾನದ ಬ್ರಹ್ಮರಥೋತ್ಸವ ಸಮಿತಿಗೆ ಇಮ್ತಿಯಾಜ್ ಪಾಷಾ ಅವರನ್ನು ಸದಸ್ಯರನ್ನಾಗಿ ನೇಮಿಸಿತ್ತು. 2022ರಲ್ಲಿ ಬಿಜೆಪಿ ಸರ್ಕಾರ ಮತ್ತೆ ಈ ಸಮಿತಿಗೆ ಅಪ್ಸರ್ ಅವರನ್ನು ಸದಸ್ಯರನ್ನಾಗಿ ಮಾಡಿತ್ತು" ಎಂದು ತಿಳಿಸಿದ್ದಾರೆ.

"ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಸಂಪತ್ತು ಲೂಟಿ ಮಾಡುವ ದುರುದ್ದೇಶದಿಂದಲೇ ಬಿಜೆಪಿ ಸರ್ಕಾರ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಮರನ್ನು ಸದಸ್ಯರನ್ನಾಗಿ ಮಾಡಿದೆ ಎಂದು ಆರೋಪಿಸುವಷ್ಟು ಕೀಳು ಮಟ್ಟಕ್ಕೆ ನಾನಿಳಿಯಲಾರೆ. ಎಲ್ಲವನ್ನೂ ಕೇಸರಿ ಕಣ್ಣುಗಳಿಂದ ನೋಡುವ ರೋಗದಿಂದ ಶೀಘ್ರ ಗುಣಮುಖರಾಗಿ ಎಂದು ನಿಮಗೂ ನಿಮ್ಮ ಸರ್ವೋಚ್ಚ ನಾಯಕರಾದ ನರೇಂದ್ರ ಮೋದಿಗೆ ಅವರಿಗೆ ಹಾರೈಸುತ್ತೇನೆ"ಎಂದು ಲೇವಡಿ ಮಾಡಿದ್ದಾರೆ.

ರಾಜ್ಯದ ಬಿಜೆಪಿ ನಾಯಕರೇ, ನಿಮಗೆ ಮಾನ-ಮರ್ಯಾದೆ ಎನ್ನುವುದೇನಾದರೂ ಇದ್ದರೆ ಮೊದಲು ಜನರನ್ನು ತಪ್ಪುದಾರಿಗೆಳೆಯುವ ಈ ಹೇಳಿಕೆಯನ್ನು ವಾಪಸು ಪಡೆದು ರಾಜ್ಯದ ಜಾತ್ಯತೀತ ಕನ್ನಡಿಗರ ಕ್ಷಮೆ ಕೇಳಬೇಕು ಅವರು ಒತ್ತಾಯಿಸಿದರು.

ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ ನಿಲ್ಲಿಸಿ: "ಹೊಸಕೋಟೆಯ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ಸದಸ್ಯರೊಬ್ಬರನ್ನು ಸೇರಿಸಿರುವ ವಿಚಾರಕ್ಕೆ ಸಂಬಂಧಿಸಿ ಅಪಪ್ರಚಾರಕ್ಕೆ ಬಿಜೆಪಿ ಇಳಿದಿದೆ. ಆದರೆ, ವಾಸ್ತವದಲ್ಲಿ ಸಮಿತಿಯಲ್ಲಿ ಸರ್ವ ಸಮುದಾಯದ ಸದಸ್ಯರನ್ನು ನೇಮಕಗೊಳಿಸುವುದು ದೇಗುಲದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗಲೂ ಅಂದಿನ ಸಚಿವರಾಗಿದ್ದ ಎಂಟಿಬಿ ನಾಗರಾಜ್ 2022ನೆ ಸಾಲಿನ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಅಫ್ಸರ್ ಎಂಬುವವರನ್ನು ಸದಸ್ಯರನ್ನಾಗಿ ಮಾಡಿದ್ದರು. 2020-21ನೆ ಸಾಲಿನ ಸಮಿತಿಯಲ್ಲಿ ಇದೆ ಬಿಜೆಪಿಯವರು ಇಮ್ತಿಯಾಜ್ ಪಾಷಾ ಎಂಬುವವರು ಸದಸ್ಯರನ್ನಾಗಿ ಮಾಡಿದ್ದನ್ನು ಮರೆತಂತಿದೆ"

"ಹಿಂದಿನ ಅವಧಿಯ ಎಲ್ಲ ಪಟ್ಟಿಗಳನ್ನು ಬಿಜೆಪಿ ತೆರೆದು ನೋಡಿ ಸ್ವಲ್ಪವಾದರೂ ವಿವೇಕದಿಂದ ವರ್ತಿಸಿದರೆ ಉತ್ತಮ. ಅನ್ಯಧರ್ಮಿಯರ ಬಗ್ಗೆ ದ್ವೇಷವನ್ನು ಬಿತ್ತಿ ಅವರ ವಿರುದ್ಧ ಹಿಂದೂ ಸಮುದಾಯವನ್ನು ಎತ್ತಿಕಟ್ಟುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಣಹದ್ದುಗಳಂತೆ ಸದಾ ಹಪಹಪಿಸುವ ಬಿಜೆಪಿಗರು ಸುಳ್ಳು ಮಾಹಿತಿಗಳನ್ನು ಹಂಚಿಕೊಳ್ಳುತ್ತ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿಯನ್ನು ಯಾವಾಗ ನಿಲ್ಲಿಸುತ್ತೀರಿ?"

ರಾಮಲಿಂಗಾರೆಡ್ಡಿ ಮುಜರಾಯಿ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News