ವಾಲ್ಮೀಕಿ ನಿಗಮದಲ್ಲಿ ಹಗರಣದ ಕುರಿತು ಮಹತ್ವದ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ

Update: 2024-07-19 14:07 GMT

ಬೆಂಗಳೂರು : ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವಾಗ ವಾಲ್ಮೀಕಿ ಅಭಿವೃದ್ಧಿ ನಿಗಮದ 89.63 ಕೋಟಿ ರೂ. ಹೈದರಾಬಾದಿನ 18 ಖಾತೆಗಳಿಗೆ ವರ್ಗಾವಣೆಯಾಗಿದೆ. ಆನಂತರ, ಅಲ್ಲಿಂದ ವಿವಿಧ 217 ಖಾತೆಗಳಿಗೆ ಹಣ ಹೋಗಿದೆ. ಇಷ್ಟಾದರೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ಮೌನವಹಿಸಿದ್ದು ಏಕೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಮಾ.16ರಂದು ಚುನಾವಣಾ ನೀತಿ ಸಂಹಿತೆ ಘೋಷಣೆಯಾಗಿದೆ. ಆದರೆ, ಮಾ.30ರಂದು ನಿಗಮದ ನಿರ್ದೇಶಕರ ಮಂಡಳಿ ಸಭೆ ನಡೆದಿದೆ ಎಂದು ಬ್ಯಾಂಕಿಗೆ ನಕಲಿ ದಾಖಲೆಗಳನ್ನು ನೀಡಿ, ಹಣ ವರ್ಗಾಯಿಸಲಾಗಿದೆ. ನೀತಿ ಸಂಹಿತೆ ಇರುವಾಗ ಸಭೆಗಳನ್ನು ನಡೆಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಆರ್ಥಿಕ ವರ್ಷದ ಕೊನೆಯಲ್ಲಿ ಆಯವ್ಯಯದಲ್ಲಿ ಕಲ್ಪಿಸಿದ ಅನುದಾನದ ನಾಲ್ಕನೆ ಕಂತನ್ನು ಎಲ್ಲರಿಗೂ ಬಿಡುಗಡೆ ಮಾಡುವ ಹಾಗೆಯೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಗೂ ಹಣ ಬಿಡುಗಡೆಯಾಗಿದೆ. ಚುನಾವಣಾ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಮಾಣದ ವ್ಯವಹಾರಗಳು ನಡೆಯುವಾಗ ಆದಾಯ ತೆರಿಗೆ ಇಲಾಖೆಯವರು ಬ್ಯಾಂಕನ್ನು ಕೇಳಲಿಲ್ಲವೆ? ಎಂದು ಮುಖ್ಯಮಂತ್ರಿ ಹೇಳಿದರು.

ಬ್ಯಾಂಕಿನವರು ಚುನಾವಣಾ ಆಯೋಗದ ಗಮನಕ್ಕೆ ಯಾಕೆ ತಂದಿಲ್ಲ? ಬ್ಯಾಂಕಿನ ಮ್ಯಾನೇಜರ್ ಆದಿಯಾಗಿ ಅನೇಕ ಅಧಿಕಾರಿ, ಸಿಬ್ಬಂದಿಗಳು, ವಾಲ್ಮೀಕಿ ನಿಗಮದ ಅಧಿಕಾರಿ ಸಿಬ್ಬಂದಿ ಮತ್ತು ಹೊರಗಿನ ಖಾಸಗಿ ವ್ಯಕ್ತಿಗಳು ಸೇರಿ ಮಾಡಿರುವ ಹುನ್ನಾರ ಇದು. ತನಿಖೆಯಿಂದ ಈ ಎಲ್ಲ ಅಂಶಗಳು ಬಯಲಾಗುತ್ತವೆ ಎಂದು ಮುಖ್ಯಮಂತ್ರಿ ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಸಂತ ನಗರ ಶಾಖೆಯಲ್ಲಿದೆ. ಆದರೆ, ಎಂ.ಜಿ.ರಸ್ತೆಯಲ್ಲಿರುವ ಶಾಖೆಯಲ್ಲಿ ಉಳಿತಾಯ ಖಾತೆ ತೆರೆದು ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಈ ರೀತಿ ಹೊಸ ಖಾತೆ ತೆರೆಯಬೇಕಾದರೆ ಆರ್ಥಿಕ ಇಲಾಖೆಯ ಗಮನಕ್ಕೆ ತರಬೇಕು. ಆದರೆ ನಿಗಮದವರು ಆ ಕೆಲಸ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನಿಗಮದ ಹಣಕಾಸಿನ ವ್ಯವಹಾರ ನಿಭಾಯಿಸುವುದು ಅಧಿಕಾರಿಗಳ ಕೆಲಸ. ವ್ಯವಸ್ಥಾಪಕ ನಿರ್ದೇಶಕರಿಗೆ ಹೆಚ್ಚಿನ ಜವಾಬ್ದಾರಿಯಿರುತ್ತದೆ. ಬಿ.ನಾಗೇಂದ್ರ ಈ ಇಲಾಖೆಯ ಸಚಿವರಾಗಿದ್ದರು ಹಾಗೂ ಬಸನಗೌಡ ದದ್ದಲ್ ನಿಗಮದ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷರಿಗೆ ಹಣಕಾಸಿನ ವ್ಯವಹಾರ ನಿಭಾಯಿಸುವ ಅಧಿಕಾರ ಇರುವುದಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.

ಮೇ 26ರಂದು ನಿಗಮದ ಲೆಕ್ಕ ಅಧೀಕ್ಷಕರ ಚಂದ್ರಶೇಖರ್ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ನಿ ಕವಿತಾ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಮೇ 28ರಂದು ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ನಿಗಮದ ಹಣ ಖಾಲಿಯಾಗಿರುವುದರ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು ಎಂದು ಅವರು ಹೇಳಿದರು.

ಅಲ್ಲದೇ, ಅಂದೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳ ವಿರುದ್ಧ ದೂರು ನೀಡಿ, ಎಫ್‍ಐಆರ್ ದಾಖಲಿಸಿದರು. ಮೇ 31ರಂದು ಸರಕಾರ ನಾಲ್ವರು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್‍ಐಟಿಯನ್ನು ರಚಿಸಿದ್ದು ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಿಂದೆಯೂ ಹಗರಣಗಳಾಗಿವೆ. ಆ ಹಗರಣಗಳನ್ನು ಹೊರತರುವ ಕೆಲಸವನ್ನು ನಾವು ಮಾಡುತ್ತೇವೆ. ವಿವಿಧ ಆರೋಪಿಗಳಿಂದ ಈಗಾಗಲೇ 34.25 ಕೋಟಿ ರೂ.ವಸೂಲಿ ಮಾಡಲಾಗಿದೆ. ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದ್ದ ಸುಮಾರು 46 ಕೋಟಿ ರೂ.ಗಳನ್ನು ಸ್ಥಗಿತಗೊಳಿಸಿದ್ದೇವೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾದ ಅಧಿಕಾರಿ ಮಹೇಶ್ ಎಂಬವರ ದೂರಿನ ಮೇರೆಗೆ ಸಿಬಿಐ ತನಿಖೆ ಕೈಗೊಂಡಿದೆ. ಈ.ಡಿ.ಯವರು ಸ್ವಯಂ ಪ್ರೇರಿತವಾಗಿ ತನಿಖೆ ನಡೆಸುತ್ತಿದ್ದಾರೆ. ಎಸ್‍ಐಟಿ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿಯನ್ನು ಬಂಧಿಸಿದ್ದು, 9 ಮಂದಿಯನ್ನು ಜೈಲಿಗೆ ಅಟ್ಟಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಬ್ಯಾಂಕಿನವರ ತಪ್ಪಿಗೆ ಸರಕಾರ ಹೇಗೆ ಹೊಣೆ: ಅಕ್ರಮ ಎಸಗಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸರಕಾರ ಬದ್ಧವಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿರುವ ಕುರಿತು ಬಾಂಕಿನ ಹಿರಿಯ ಅಧಿಕಾರಿಗಳು ಸಿಬಿಐಗೆ ಬರೆದಿರುವ ಪತ್ರದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಇದೊಂದು ರಾಷ್ಟ್ರೀಕೃತ ಬ್ಯಾಂಕ್. ಈ ಬ್ಯಾಂಕುಗಳು ಕೇಂದ್ರ ಹಣಕಾಸು ಸಚಿವಾಲಯದ ಅಧೀನದಲ್ಲಿ ಬರುತ್ತದೆ. ಹಾಗಾದರೆ, ಈ ಅಕ್ರಮಕ್ಕೆ ಕೇಂದ್ರ ಹಣಕಾಸು ಸಚಿವರನ್ನು ಹೊಣೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ರಾಜ್ಯ ಸರಕಾರಕ್ಕೆ ಹಾಗೂ ತನಗೆ ಮಸಿ ಬಳಿಯುವ ಪ್ರಯತ್ನವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಆದುದರಿಂದ, ನನಗೆ ಸಂಬಂಧ ಇಲ್ಲದಿದ್ದರೂ ನನ್ನ ರಾಜೀನಾಮೆಗೆ ಆಗ್ರಹಿಸುತ್ತಿವೆ ಎಂದು ದೂರಿದರು.

ಚಂದ್ರಶೇಖರ್ ಬರೆದಿಟ್ಟಿರುವ ಡೆತ್‍ನೋಟ್‍ನಲ್ಲಿಯೂ ಬ್ಯಾಂಕ್ ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿರುವ ಕುರಿತು ಉಲ್ಲೇಖಿಸಿದ್ದಾರೆ. ನಾಗೇಂದ್ರ ಅವರು ಡೆತ್‍ನೋಟ್‍ನಲ್ಲಿ ತಮ್ಮ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದರು ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ 87 ಕೋಟಿ ರೂ.ಹಗರಣದ ಬಗ್ಗೆ ಶಾಸಕ ಗೂಳಿಹಟ್ಟಿ ಶೇಖರ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು. ಎಪಿಎಂಸಿಯಲ್ಲಿ ಆವರ್ತನಿಧಿ ಲೂಟಿ ಮಾಡಿದಾಗ, ದೇವರಾಜ ಅರಸ್ ಟ್ರಕ್ ಟರ್ಮಿನಲ್ ಹಗರಣದಲ್ಲಿ 47.10 ಕೋಟಿ ರೂ. ಅವ್ಯವಹಾರವಾದಾಗ, ಅಂದಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಿದರೆ? ಈ ಪ್ರಕರಣಗಳಲ್ಲಿ ಈ.ಡಿ. ಯಾಕೆ ಸ್ವಯಂ ಪ್ರೇರಿತವಾಗಿ ತನಿಖೆ ಕೈಗೆತ್ತಿಕೊಂಡಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಎಲ್ಲ ಅಭಿವೃದ್ಧಿ ನಿಗಮಗಳ ಹಣವನ್ನು ಕಡ್ಡಾಯವಾಗಿ ರಾಜ್ಯ ಖಜಾನೆಯಲ್ಲಿ ಜಮಾ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರಲು ಹಲವು ಮಾರ್ಗಸೂಚಿಗಳನ್ನು ಹಣಕಾಸು ಇಲಾಖೆ ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಸ್‍ಐಟಿ ಬಂಧಿಸಿರುವ ಆರೋಪಿಗಳು: ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಜೆ.ಜಿ.ಪದ್ಮನಾಭ, ಲೆಕ್ಕಾಧೀಕ್ಷಕ ಪರಶುರಾಮ್ ದುರ್ಗಣ್ಣನವರ್, ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ, ನೆಕ್ಕುಂಟೆ ನಾಗರಾಜ್, ನಾಗೇಶ್ವರರಾವ್, ಹೈದರಾಬಾದಿನ ಎಂ.ಚಂದ್ರಮೋಹನ್, ಗಾದಿರಾಜು ಸೂರ್ಯನಾರಾಯಣ ವರ್ಮ, ಸಾಯಿತೇಜ, ಉಡುಪಿಯ ಜಗದೀಶ್ ಜಿ.ಕೆ, ಬೆಂಗಳೂರಿನ ತೇಜ ತಮಟಂ, . ಪಿಟ್ಟಲ ಶ್ರೀನಿವಾಸ ಗಚ್ಚಿ ಬೌಲಿ, ಆಂಧ್ರಪ್ರದೇಶದ ಕಾಕಿ ಶ್ರೀನಿವಾಸ ರಾವ್.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News