ಶಾಸಕರ ಬೆಂಬಲ ಇರುವವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿ: ಸಚಿವ ಕೆ.ಎನ್.ರಾಜಣ್ಣ

Update: 2024-01-10 08:49 GMT

ತುಮಕೂರು,ಜ.10:ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಲ್ಲಿಯವರೆಗೆ ಶಾಸಕರ ಬೆಂಬಲ,ಹೈಕಮಾಂಡ್ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೆ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕೆ 5 ವರ್ಷ ಪೂರೈಸಬಾರದು.ಮುಖ್ಯಮಂತ್ರಿಗಳಿಗೆ ಶಾಸಕರ ಬೆಂಬಲ, ಪಕ್ಷದ ಹೈಕಮಾಂಡ್ ಆಶೀರ್ವಾದ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಅವರೇ ಮುಖ್ಯಮಂತ್ರಿಗಳಾಗಿ ಇರುತ್ತಾರೆ ಎಂದರು.

ಈಗಾಗಲೇ ಮೂರು ಡಿಸಿಎಂ ನೇಮಕದ ವಿಚಾರವನ್ನು ಪಕ್ಷದ ಉಸ್ತುವಾರಿ ಸುರ್ಜೇವಾಲಾ ಅವರ ಮುಂದೆ ಪ್ರಸ್ತಾಪ ಮಾಡಿದ್ದೇವೆ. ಇನ್ನು ಮುಂದೆ ಈ ಸಂಬಂಧ ಯಾರು ತೀರ್ಮಾನ ತೆಗೆದುಕೊಳ್ಳುತ್ತಾರೋ ಅವರ ಮುಂದೆ ಈ ವಿಚಾರ ಪ್ರಸ್ತಾಪ ಮಾಡಿದರೆ ಸೂಕ್ತ ಎನ್ನುವುದು ನನ್ನ ಭಾವನೆ. ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯ ಗಾಂಧಿ, ರಾಹುಲ್‍ಗಾಂಧಿಯವರ ಮುಂದೆ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ನಂತರ ಅವರು ತೀರ್ಮಾನ ಕೈಗೊಳ್ಳುತ್ತಾರೆ. ಹೊಸದಾಗಿ ಡಿಸಿಎಂ ಆಗುವವರು, ಹಾಲಿ ಡಿಸಿಎಂ ಅವರ ಅಧಿಕಾರವನ್ನು ಕಿತ್ತುಕೊಳ್ಳಲ್ಲ ಎಂದು ಕೆ.ಎನ್.ರಾಜಣ್ಣ ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News