ನಾಳೆ ಹೊಸದಿಲ್ಲಿಗೆ ಸಿಎಂ-ಡಿಸಿಎಂ : ಕುತೂಹಲ ಮೂಡಿಸಿರುವ ವರಿಷ್ಠರ ಭೇಟಿ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ಕಾಂಗ್ರೆಸ್ ಹೈಕಮಾಂಡ್ ನಾಯಕರ ಭೇಟಿಗೆ ಹೊಸದಿಲ್ಲಿಗೆ ತೆರಳುತ್ತಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಲೋಕಸಭಾ ಚುನಾವಣೆಯ ಫಲಿತಾಂಶ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ, ಮುಡಾ ಹಗರಣದ ಸದ್ದಿನ ಬೆನ್ನಲ್ಲೆ ಸಚಿವ ಸಂಪುಟ ಪುನರ್ ರಚನೆ ಹಾಗೂ ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕಕ್ಕೆ ಸಂಬಂಧಪಟ್ಟಂತೆ ಉಭಯ ನಾಯಕರು ವರಿಷ್ಠರ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಸುಮಾರು ಆರರಿಂದ ಏಳು ಸಚಿವರ ಖಾತೆ ಬದಲಾಗಬಹುದು ಅಥವಾ ಕ್ರಿಯಾಶೀಲವಾಗಿ ಕೆಲಸ ಮಾಡದವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣದಿಂದಾಗಿ ಮಾಜಿ ಸಚಿವ ಬಿ.ನಾಗೇಂದ್ರ ಬಂಧನವಾಗಿರುವುದು ಹಾಗೂ ಮುಡಾದಿಂದ ಮುಖ್ಯಮಂತ್ರಿ ಕುಟುಂಬಕ್ಕೆ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಸರಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.
ಇದೇ ವಿಷಯವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸರಕಾರದ ವಿರುದ್ಧ ಸದನದಲ್ಲಿ ನಿರಂತರ ಹೋರಾಟ ನಡೆಸಿದವು. ಅಲ್ಲದೆ, ಆ.3ರಿಂದ ಬೆಂಗಳೂರಿನಿಂದ ಮೈಸೂರು ವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿವೆ. ಈ ವಿಚಾರಗಳ ಬಗ್ಗೆ ಹೈಕಮಾಂಡ್‍ಗೆ ಉಭಯ ನಾಯಕರು ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಹೆಚ್ಚುವರಿ ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿ ಮಾಡಬೇಕು ಎಂದು ಪದೇ ಪದೇ ಕಾಂಗ್ರೆಸ್‍ನ ಹಿರಿಯ ಸಚಿವರು ಪ್ರಸ್ತಾವ ಮುಂದಿಡುತ್ತಿರುವ ಕುರಿತು ವರಿಷ್ಠರ ಭೇಟಿ ವೇಳೆ ಚರ್ಚೆಯಾಗುವ ಸಾಧ್ಯತೆಗಳಿವೆ.
ಬೆಂಗಳೂರಿನ ಮೌಲಾನ ಆಝಾದ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್, ‘ದೇವರು ಹಣೆ ಬರಹ ಬರೆದಿರುತ್ತಾನೆ. ಮುಂದಿನ ದಿನಗಳಲ್ಲಿ ನಾನು ಸಚಿವನಾಗಿ ಇರುತ್ತೇನೋ, ಇಲ್ಲವೋ ಗೊತ್ತಿಲ್ಲ. ಈಗ ನನ್ನನ್ನು ಅಲ್ಪಸಂಖ್ಯಾತ ಸಚಿವನಾಗಿ ಮಾಡಿದ್ದಾರೆ. ಮುಂದಿನ ನಾಲ್ಕು ವರ್ಷ ನಮ್ಮ ಕಾಂಗ್ರೆಸ್ ಸರಕಾರ ಇರುತ್ತದೆ’ ಎಂದು ಹೇಳುವ ಮೂಲಕ ಸಂಪುಟ ಪುನರ್ ರಚನೆ ಅಥವಾ ಸಚಿವರ ಖಾತೆ ಬದಲಾವಣೆಯಾಗುವ ವಿಚಾರಕ್ಕೆ ಪುಷ್ಠಿ ನೀಡಿದ್ದಾರೆ.