ಸಿದ್ದರಾಮಯ್ಯ ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತಂದಿದ್ದಾರೆ: ಪ್ರಹ್ಲಾದ್ ಜೋಶಿ ವಾಗ್ದಾಳಿ

Update: 2024-02-14 11:44 GMT

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತಂದಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದರು.

ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ʼಸುಳ್ಳು ಹೇಳೋದನ್ನು ಸಿಎಂ ಸ್ವಭಾವ ಮಾಡಿಕೊಂಡಿದ್ದಾರೆ. ಹಾಗಾಗಿ ನಾನು ಅವರನ್ನು ಸುಳ್ಳುರಾಮಯ್ಯ ಎಂದು ಕರೆಯುತ್ತೇನೆʼ ಎಂದರು.

ಹತ್ತು ಸಲ ನಿವೃತ್ತಿ ಆಗಬೇಕಾಗುತ್ತದೆ: ನಾನು ಸುಳ್ಳು ಹೇಳಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ಸಿದ್ದರಾಮಯ್ಯ ಪದೇಪದೆ ಸುಳ್ಳು ಹೇಳುತ್ತಲೇ ಇರುತ್ತಾರೆ. ಹೇಳೋದೆಲ್ಲವೂ ಸುಳ್ಳೇ. ಹತ್ತು ಬಾರಿ ನಿವೃತ್ತಿ ಪಡೆಯಬೇಕಾಗುತ್ತದೆ ಎಂದು ಲೇವಡಿ ಮಾಡಿದರು.

NDRF ಫಂಡ್​ನಲ್ಲಿ ಯುಪಿಎ ಯಾವತ್ತೂ ಹೆಚ್ಚು ಹಣ ಕೊಟ್ಟಿಲ್ಲ. ಆದರೆ,  ನಾವು ಹೆಚ್ಚುವರಿ ಮಾತ್ರವಲ್ಲ ಅಡ್ವಾನ್ಸ್ ಹಣ ಕೊಡ್ತೀದ್ದೇವೆ. ಇನ್ನು, ಒಂದೇ ಒಂದು ರೂಪಾಯಿ GST ಹಣ ಕೂಡ ಬಾಕಿ ಇಲ್ಲ. 10 ವರ್ಷ ಪ್ರಧಾನಿ ಮೋದಿ ಅವರ ಅವಧಿಯಲ್ಲಿ ಕೇಂದ್ರ ಪಾಲಿನ ತೆರಿಗೆ ಹಂಚಿಕೆಯಲ್ಲಿ 2.85 ಲಕ್ಷ ಕೋಟಿ ಕೊಟ್ಟಿದ್ದೇವೆ ಎಂದು ಜೋಶಿ ವಿವರಿಸಿದರು.

ಕೇಂದ್ರದಿಂದ ಯಾವುದೇ ವಿಶೇಷ ಅನುದಾನ ಕೊಟ್ಟಿಲ್ಲ ಅಂತಿದ್ದಾರೆ. ಆದರೆ ಕರ್ನಾಟಕ ಸರಕಾರಕ್ಕೆ 50 ವರ್ಷದ ಅವಧಿಗೆ 6279 ಕೋಟಿ ರು. ಬಡ್ಡಿ ರಹಿತ ಸಾಲ ಕೊಟ್ಟಿದ್ದೇವೆ ಎಂದು ಜೋಶಿ ಸ್ಪಷ್ಟಪಡಿಸಿದರು.

ಕೊಟ್ಟ ಅನುದಾನ ಬಳಕೆ ಮಾಡಿಲ್ಲ: ಕೇಂದ್ರ ಸರಕಾರ ವಿವಿಧ ಯೋಜನೆಗೆ ನೀಡಿದ ಅನುದಾನವನ್ನು ಸಂಪೂರ್ಣ ಬಳಕೆಯೇ ಆಗಿಲ್ಲ. ಶೇ. 30 ರಿಂದ 38 ರಷ್ಟು ಅನುದಾನ ಖರ್ಚು ಆಗದೇ ಉಳಿದಿದೆ ಎಂದರು.

ಮಾಹಿತಿ ಡಿಲೀಟ್: ಅನುದಾನ ವಿಚಾರವಾಗಿ ರಾಜ್ಯ ಸರಕಾರದ ಡ್ಯಾಶ್ ಬೋರ್ಡ್ ನಲ್ಲಿ ಎಲ್ಲ ಮಾಹಿತಿ ಹಾಕಿದ್ದರು. ಅದನ್ನು ಡೌನ್​ಲೋಡ್ ಮಾಡಲು ಬಿಜೆಪಿ ನಾಯಕರಿಗೆ ಸೂಚಿಸಿದ್ದೆ. ಅಷ್ಟರಲ್ಲಿ ಆಗಲೇ ಅಂಕಿ-ಅಂಶವೇ ಡಿಲೀಟ್ ಆಗಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇಲ್ಲಸಲ್ಲದ್ದನ್ನು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಜೋಶಿ ಗಂಭೀರ ಆರೋಪ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News