ಸಿದ್ದರಾಮಯ್ಯಗೆ ಹಸಿವಿನ ಅನುಭವ ಇದೆ, ನನ್ನಂತವನ ದೃಷ್ಟಿಯಲ್ಲಿ ‘ಅನ್ನಭಾಗ್ಯ ದೇವರು’: ಶಾಸಕ ಪ್ರದೀಪ್ ಈಶ್ವರ್
ಬೆಂಗಳೂರು, ಜು.12: ‘ಅನ್ನಭಾಗ್ಯ ಶ್ರೀಮಂತರ ದೃಷ್ಟಿಯಿಂದ ರೇಷನ್ ಅಷ್ಟೇ. ಆದರೆ, ನನ್ನಂತವನ ದೃಷ್ಟಿಯಲ್ಲಿ ಅನ್ನ ಎನ್ನುವುದು ದೇವರು’ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಅನ್ನಭಾಗ್ಯ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸಿದ್ಧರಾಮನಹುಂಡಿಯಲ್ಲಿ ಹುಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸಿವಿನ ಅನುಭವ ಇದೆ. ಅದಕ್ಕೆ ಅನ್ನಭಾಗ್ಯ ಯೋಜನೆ ತಂದಿದ್ದಾರೆ ಎಂದು ಸರಕಾರದ ಗ್ಯಾರಂಟಿ ಯೋಜನೆಗಳನ್ನು ಪ್ರಶಂಶಿಸಿದರು.
ಗೃಹಜ್ಯೋತಿ ಯೋಜನೆ ಕೇವಲ ಮನೆಯನ್ನು ಬೆಳಗುತ್ತಿಲ್ಲ. ಕೋಟ್ಯಂತರ ಮಕ್ಕಳು ತಡರಾತ್ರಿಯ ವರೆಗೆ ಓದಲು ಸಹಾಯಕವಾಗಿದೆ. ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಲು ಸರಕಾರ ಆದ್ಯತೆ ನೀಡಬೇಕಿದೆ. ಅದರ ಬಗ್ಗೆ ಸಂಬಂಧಿಸಿದ ಸಚಿವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
‘ಇಂಗ್ಲೀಷ್ ಭಾಷೆ ಇರುವುದೇ ತಪ್ಪು ತಪ್ಪು ಮಾತನಾಡಲು. ಆದರೆ, ಕನ್ನಡ ಇರುವುದು ಸರಿಯಾಗಿ ಮಾತನಾಡಲು. ಬಡವರ ದೇವಾಲಯ ಕನ್ನಡ ಶಾಲೆ. ಬಡವರ ಮಕ್ಕಳು ವಿಧಾನಸೌಧಕ್ಕೆ ಬರೋದು ಸಾಧ್ಯವಾಗಿರೋದು ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದಿಂದ ಎಂದ ಅವರು, ನಮ್ಮ ಪಕ್ಷದ ನಾಯಕರು ನನ್ನಂತ ಬಡವರ ಮಗನನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ. ಸರಕಾರಿ ಆಸ್ಪತ್ರೆಯ ಚಿಕಿತ್ಸಾ ಗುಣಮಟ್ಟ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು. ಸರಕಾರಿ ಆಸ್ಪತ್ರೆಗಳನ್ನು ಉಳಿಸಬೇಕು ಎಂದು ಆಗ್ರಹಿಸಿದರು.