ಸಿದ್ದರಾಮಯ್ಯನವರೇ, ನನ್ನ ದನಿ ಬಡವರ ಪರ; ನಿಮ್ಮಂತೆ ಯಾರ ಮುಲಾಜಿಗೂ ಬಿದ್ದವನಲ್ಲ: ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ''ಐಶಾರಾಮಯ್ಯನವರೇ, ನನ್ನ ದನಿ ಬಡವರ ಪರ. ನಿಮ್ಮಂತೆ ಯಾರ ಮುಲಾಜಿಗೂ ಬಿದ್ದವನಲ್ಲ ನಾನು. ರಾಜ್ಯಕ್ಕೆ ರಾಜ್ಯವೇ ಬರದ ಬೆಂಕಿಯಲ್ಲಿ ಬೇಯುತ್ತಿದೆ. ರೈತಸಂಕುಲ ನರಕದಲ್ಲಿದೆ. ಅವರ ಸಾಲಮನ್ನಾ ಮಾಡಿ'' ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, ''#YstTax, #SstTax ಕಲೆಕ್ಷನ್ ಬದಿಗಿಟ್ಟು ರೈತರ ಪರ ನಿಲ್ಲಿ. ಗ್ಯಾರಂಟಿ ಗ್ಯಾರಂಟಿ ಎನ್ನುತ್ತಿದ್ದೀರಲ್ಲ, ರೈತರ ಬದುಕಿಗೆ ಗ್ಯಾರಂಟಿ ಕೊಡಿ. ನಾನು ಸಾಲಮನ್ನಾ ಮಾಡಿ ತೋರಿಸಿದ್ದೇನೆ, ಈಗ ನೀವು ಮಾಡಿ. ಬರೀ ಬಾಯಿ ಮಾತೇಕೆ? ಇದೇ ನನ್ನ ಸವಾಲು'' ಎಂದು ಹೇಳಿದ್ದಾರೆ.
''ಸನ್ಮಾನ್ಯ ಸಿದ್ದರಾಮಯ್ಯನವರೇ.. ನೀವು ಬಡವರ ಬಗ್ಗೆ ಮಾತನಾಡುತ್ತಿರುವುದೇ ಸೋಜಿಗ. ಐಶಾರಾಮಿಯಾದ ನೀವು ಮೇಲೆ 'ಸರಳರಾಮಯ್ಯ! ಒಳಗೆ ಐಶಾರಾಮಯ್ಯ!!' ಹೌದಲ್ಲವೇ? ನಾನು ಹೇಳಿದ್ದನ್ನೇಕೆ ತಿರುಚುತ್ತೀರಿ? ಗ್ಯಾರಂಟಿಗಳ ಬಗ್ಗೆ ನನಗೇಕೆ ಹೊಟ್ಟೆಯುರಿ? ನಾನು ಹೇಳಿದ್ದೇನು? ನೀವು ವಕ್ರೀಕರಿಸುತ್ತಿರುವುದೇನು? ಕಾಸು ಕೊಟ್ಟು ಸಮೀಕ್ಷೆ ಮಾಡಿಸಿಕೊಂಡ ಹಾಗಲ್ಲ ಇದು. 5 ಗ್ಯಾರಂಟಿ ಕೊಟ್ಟಿದ್ದೀರಿ, ಸರಿ. ಅದನ್ನು ನೆಟ್ಟಗೆ ಕೊಡಲು ವಿಫಲರಾಗಿದ್ದೀರಿ ಎಂದಿದ್ದೇನೆ. ಇಲ್ಲವೆಂದರೆ ಹೇಳಿ, ಬಹಿರಂಗ ಚರ್ಚೆಗೇ ಬರುತ್ತೇನೆ. ಎಲ್ಲಿಗೆ ಬರಲಿ?'' ಎಂದು ಆಹ್ವಾನಿಸಿದ್ದಾರೆ.
''ಕೋಟ್ಯಂತರ ಫಲಾನುಭವಿಗಳು ಸಂಭ್ರಮಿಸುತ್ತಿದ್ದಾರೆಯೇ? ಸತ್ಯ ಹೇಳಿ. ಮಾಧ್ಯಮಗಳು ಸುಳ್ಳು ಹೇಳುತ್ತಿವೆಯೇ? ಪೊಳ್ಳು ಬರೆಯುತ್ತಿವೆಯೇ? ನಿಮ್ಮ ಪ್ರಕಾರ ಮಾಧ್ಯಮಗಳಿಗೆ, ಪ್ರತಿಪಕ್ಷಗಳಿಗೆ ಸುಳ್ಳು ಹೇಳುವುದೇ ಕೆಲಸವೇ? ಹಿಂದೆ ನೀವು ಮಾಡಿದ್ದೂ ಇದೇನಾ? ನಿಮ್ಮ 'ಸಮಾಜವಾದಿ ಆತ್ಮಸಾಕ್ಷಿ' ಹೀಗಂತ ಹೇಳುತ್ತಿದೆಯಾ ಗ್ಯಾರಂಟಿಗಳನ್ನು ಕಾಂಗ್ರೆಸ್ ಮತದಾರರಿಗಷ್ಟೇ ತಂದಿದ್ದೀರಿ ಎಂದು ನಾನು ಹೇಳಿದ್ದೇನೆಯೇ? ಬಹುಶಃ ನಿಮಗೆ ಅಂಥ ಮನಃಸ್ಥಿತಿ ಇದ್ದರೂ ಇದ್ದೀತು.'' ಎಂದು ಕಿಡಿಕಾರಿದ್ದಾರೆ.
''ಗ್ಯಾರಂಟಿಗಳು ಸರಿಯಾಗಿ ಅನುಷ್ಠಾನವಾಗಿಲ್ಲ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೇನೆ. ಹಾಗಾದರೆ, ಮಾಧ್ಯಮಗಳಿಗೆ ಸತ್ಯ ತಿಳಿಸುವುದೇ ಅಪರಾಧವೇ? ನಿಮ್ಮ ದರ್ಬಾರಿನಲ್ಲಿ ಮಾಧ್ಯಮಗೋಷ್ಠಿಯೂ ಮಹಾಪಾಪವೇ? ನಿಮ್ಮ 'ಸಿದ್ದಾಂತರಾಳ' ಹೀಗೆಂದು ಅಪ್ಪಣೆ ಕೊಟ್ಟಿದೆಯಾ? ಹಳ್ಳಿಗಳಿಗೆ ಹೋಗಿದ್ದೇನೆ, ಫಲಾನುಭವಿಗಳನ್ನು ಮಾತನಾಡಿಸಿದ್ದೇನೆ. ಸತ್ಯ ಹೇಳಿದ್ದೇನೆ. ಬನ್ನಿ, ನಿಮಗೂ ಸತ್ಯದರ್ಶನ ಮಾಡಿಸುತ್ತೇನೆ'' ಎಂದು ಕುಮಾರಸ್ವಾಮಿ ಹೇಳಿದ್ದಾರೆ.