‘ಯಾವ ನಾಲಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತಿದ್ದೀರಿ?’ : ಆರ್‌.​ಅಶೋಕ್​ಗೆ ಸಿದ್ದರಾಮಯ್ಯ ತಿರುಗೇಟು

Update: 2024-08-19 07:59 GMT

ಆರ್.ಅಶೋಕ್/ಸಿದ್ದರಾಮಯ್ಯ

ಬೆಂಗಳೂರು : "ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲವೇ? ಈಗ ಸಿದ್ದರಾಮಯ್ಯನವರು ಯಾಕೆ ರಾಜೀನಾಮೆ ನೀಡುತ್ತಿಲ್ಲ?’’ ಎಂದು ವಿರೋಧಪಕ್ಷದ ನಾಯಕರಾದ ಆರ್.ಅಶೋಕ್ ಅವರು ಮತ್ತೊಮ್ಮೆ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಅವರು, "ಆರ್‌.ಅಶೋಕ್‌ ಅವರೇ, ಈ ರೀತಿ ಬೇಕಾಬಿಟ್ಟಿ ಹೇಳಿಕೆ ನೀಡುವ ಮೊದಲು ವಾಸ್ತವಾಂಶವನ್ನು ಪರಿಶೀಲಿಸಿಕೊಂಡು ಮಾತನಾಡಿ" ಎಂದು ಸಲಹೆ ನೀಡಿದ್ದಾರೆ.

ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ರಾಚೇನಹಳ್ಳಿ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು 2011ರ ಜನವರಿ 21ರಂದು. ಅವರ ವಿರುದ್ಧ ಅರ್ಜಿದಾರರು ನೀಡಿದ್ದ 1600 ಪುಟಗಳ ಪ್ರಬಲ ದಾಖಲೆಗಳ ಸಾಕ್ಷ ಕೂಡಾ ಇತ್ತು. ಹಾಗಿದ್ದರೂ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಅಶೋಕ್ ಅವರೇ, ಆ ಕಾಲದಲ್ಲಿ ನೀವೇ ಅಲ್ಲವೇ ಯಡಿಯೂರಪ್ಪನವರು ರಾಜೀನಾಮೆ ಯಾಕೆ ನೀಡಬೇಕು ಎಂದು ಪ್ರಶ್ನಿಸಿದ್ದವರು. ಈಗ ಯಾವ ನಾಲಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತಿದ್ದೀರಿ? ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು 2011ರ ಆಗಸ್ಟ್ ನಾಲ್ಕರಂದು. ಅದು ನ್ಯಾ.ಸಂತೋಷ್ ಹೆಗ್ಡೆ ಅವರ ನೇತೃತ್ವದ ಲೋಕಾಯುಕ್ತವು ಅಕ್ರಮ ಗಣಿಗಾರಿಕೆಯ ತನಿಖಾ ವರದಿಯನ್ನು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರಿಗೆ ಸಲ್ಲಿಸಿದ ನಂತರ. ಅಕ್ರಮ ಗಣಿಗಾರಿಕೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ 16,500 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಹೇಳಿತ್ತು ಎಂದು ವಿವರಿಸಿದರು.

ಅಶೋಕ್ ಅವರೇ, ಹಳೆಯದ್ದನ್ನೆಲ್ಲವನ್ನೂ ನೆನಪಿಸಿಕೊಳ್ಳಿ, ಆಗ ನೀವೆಲ್ಲರೂ ಸೇರಿ ಯಡಿಯೂರಪ್ಪ ವಿರುದ್ಧವೇ ಏನೆಲ್ಲ ಕುತಂತ್ರ ಮಾಡಿದ್ದೀರಿ ಎನ್ನುವುದೂ ನೆನಪಾಗಬಹುದು. ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದ ರಾಚೇನಹಳ್ಳಿ ಡಿನೋಟಿಫಿಕೇಷನ್ ಹಗರಣದ ತನಿಖೆ ನಡೆಸಿದ್ದ ನ್ಯಾ.ಸಂತೋಷ್ ಹೆಗ್ಡೆ ನೇತೃತ್ವದ ಲೋಕಾಯುಕ್ತವೇ ಆರೋಪಗಳೆಲ್ಲವನ್ನು ಸಾಬೀತುಪಡಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಮೂಲಕ ರಾಜ್ಯಪಾಲರ ಪ್ರಾಸಿಕ್ಯೂಷನ್ ನಿರ್ಧಾರ ನ್ಯಾಯಯುತವಾಗಿತ್ತು ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರೇ ದೃಡೀಕರಿಸಿದ್ದರಲ್ಲವೇ?. ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ಒಂದಲ್ಲ ಎರಡಲ್ಲ ಹದಿನೈದು ಡಿನೋಟಿಫಿಕೇಷನ್ ಹಗರಣಗಳ ತನಿಖೆಗೆ ಅನುಮತಿ ನೀಡಿದ್ದರು. ಹೆಚ್ಚಿನ ಮಾಹಿತಿಗೆ ನ್ಯಾ.ಸಂತೋಷ್ ಹೆಗ್ಡೆ ಅವರು ನೀಡಿದ್ದ ಅಕ್ರಮ ಗಣಿಗಾರಿಕೆಯ ತನಿಖಾ ವರದಿಯನ್ನು ತೆಗೆದು ಓದಿಕೊಳ್ಳಿ ಎಂದು ಹೇಳಿದರು.

ಇಂದು ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಪರವಾಗಿ ಕಣ್ಣೀರು ಸುರಿಸುತ್ತಿರುವ ಬಿಜೆಪಿ ನಾಯಕರಿಗೆ 2011ರಲ್ಲಿ ಆಗಿನ ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರ ಬಗ್ಗೆ ಅವಹೇಳನ ಮಾಡಿದ್ದೆಲ್ಲ ಮರೆತುಹೋದಂತಿದೆ. ನಮ್ಮ ಪಕ್ಷದ ಕಾರ್ಯಕರ್ತರು ಶಾಂತಿಯುತವಾಗಿ ನಡೆಸಿರುವ ಪ್ರತಿಭಟನೆಯನ್ನು ಪ್ರಶ್ನಿಸುತ್ತಿರುವ ಬಿಜೆಪಿ ನಾಯಕರಿಗೆ 2011ರಲ್ಲಿ ರಾಜ್ಯಪಾಲರ ನಡೆಯನ್ನು ವಿರೋಧಿಸಿ ಕರ್ನಾಟಕ ಬಂದ್ ಗೆ ಕರೆ ನೀಡಿದ್ದೂ ಕೂಡಾ ಮರೆತುಹೋಗಿದೆ ಎಂದು ಟೀಕಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News