ಎತ್ತರದ ಕಟ್ಟಡಗಳಿಗೆ ಪರವಾನಗಿ ಪಡೆಯುವ ನಿಯಮಗಳು ಸರಳೀಕರಣ: ಗೃಹ ಸಚಿವ ಪರಮೇಶ್ವರ್

Update: 2023-07-19 17:14 GMT

ಬೆಂಗಳೂರು, ಜು.19: ರಾಜ್ಯದಲ್ಲಿ ಎತ್ತರದ ಕಟ್ಟಡಗಳಿಗೆ ಅಗ್ನಿಶಾಮಕ ದಳದ ಪರವಾನಗಿ ಪಡೆಯದೆ ನಿಯಮ ಉಲ್ಲಂಘಿಸಿರುವ 19ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಅಗ್ನಿಶಾಮಕ ದಳದ ಪರವಾನಗಿ ಪಡೆಯುವ ನಿಯಮಗಳನ್ನು ಸರಳೀಕರಣ ಮಾಡಲು ಸರಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬುಧವಾರ ಪರಿಷತ್ತಿನಲ್ಲಿ ಕರ್ನಾಟಕ ಅಗ್ನಿಶಾಮಕ ದಳ ತಿದ್ದುಪಡಿ ವಿಧೇಯಕ-2023ನ್ನು ಮಂಡಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಎತ್ತರದ ಕಟ್ಟಡಗಳಿಗೆ ಅಗ್ನಿಶಾಮಕ ದಳದ ಪರವಾನಗಿ ಪಡೆಯದೆ 19,294 ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಬೆಂಗಳೂರು ಒಂದರಲ್ಲೆ 15,924 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಕಟ್ಟಡ ನಿರ್ಮಾಣದ ಸಮಯದಲ್ಲಿ ಪದೇ ಪದೇ ನಿಯಮ ಉಲ್ಲಂಘನೆಯಾಗುವುದನ್ನು ತಪ್ಪಿಸಲು ಹಾಗೂ ಪರದಾಟ ಮಾಡುವುದನ್ನು ತಡೆಯಲು ವಿಧೇಯಕವನ್ನು ತರಲಾಗಿದೆ. ಅಗ್ನಿ ಅವಘಡಗಳ ಸಂದರ್ಭದಲ್ಲಿ ಜನರ ಜೀವ ಉಳಿಸಲು ಬೇಕಾಗುವ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾಗೆಯೇ ಕಟ್ಟಡ ನಿರ್ಮಾಣದ ಸಮಯದಲ್ಲಿ ಎನ್‍ಓಸಿ ನೀಡುವಾಗ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಪರವಾನಗಿ ಪಡೆಯುವ ನಿಯಮಗಳನ್ನು ಸರಳೀಕರಣ ಮಾಡಲು ಸರಕಾರ ನಿರ್ಧರಿಸಿದೆ. ಎತ್ತರದ ಕಟ್ಟಡಗಳಿಗೆ ಅಗ್ನಿಶಾಮಕ ದಳದ ಅನುಮತಿ ಪಡೆಯುವ ಅಧಿಕಾರ ಸರಕಾರದಲ್ಲಿದ್ದು, ಅದನ್ನು ಪೊಲೀಸ್ ಮಹಾನಿರ್ದೇಶಕರ ಹಂತಕ್ಕೆ ತರಲು ನಿರ್ಧರಿಸಲಾಗಿದೆ. ಶಾಲಾ-ಕಾಲೇಜು ಸೇರಿದಂತೆ ಕಡಿಮೆ ಎತ್ತರದ ಕಟ್ಟಡಗಳಿಗೆ ಜಿಲ್ಲಾ ಮಟ್ಟದಲ್ಲೇ ಅಗ್ನಿಶಾಮಕ ದಳದ ಅನುಮತಿ ನೀಡಲಾಗುವುದು ಎಂದು ಹೇಳಿದರು.

ಐಟಿ ಕಂಪೆನಿಗಳು ಕಟ್ಟಡ ನಿರ್ಮಿಸುವ ವೇಳೆ ಅಗ್ನಿಶಾಮಕ ದಳದ ಪರವಾನಗಿ ಸಿಗದೆ ಪರದಾಡುವುದು ಸೇರಿದಂತೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ವಿವಿಧ ಭಾಗಗಳಲ್ಲಿ ಅತಿ ಎತ್ತರದ ಕಟ್ಟಡಗಳಿಗೆ ಪರವಾನಗಿ ಪಡೆಯಲು ಇದ್ದ ಅಡೆತಡೆಗಳನ್ನು ನಿವಾರಿಸಲು ಸರಕಾರ ಮುಂದಾಗಿದೆ ಎಂದು ಅವರು ತಿಳಿಸಿದರು.

ಅಗ್ನಿ ಅವಘಡಗಳ ವೇಳೆ ಅದನ್ನು ತಡೆಯಲು ಬೇಕಾದ ಅಗತ್ಯ ಸಲಕರಣೆಗಳು ಇಲಾಖಾ ಬಳಿ ಇದೆ. 32 ಮೀಟರ್ ಎತ್ತರದ ಏಣಿ, 54 ಮೀಟರ್ ಮತ್ತು 90 ಮೀಟರ್ ಎತ್ತರದ ಏಣಿಗಳಿವೆ. ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಅವುಗಳನ್ನು ತಡೆಯಲು ಇನ್ನಿತರೆ ಪ್ರಕರಣಗಳು ಇವೆ. ಅಗ್ನಿಶಾಮಕ ಸಿಬ್ಬಂದಿಗೆ ಕಾಲಕಾಲಕ್ಕೆ ಶೂ, ಗ್ಲೌಸ್ ಸೇರಿದಂತೆ ಆಧುನೀಕರಣದ ಸಲಕರಣೆಗಳನ್ನು ನೀಡಲಾಗುತ್ತದೆ ಎಂದರು. ಚರ್ಚೆಯ ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News