ಹಗರಣಗಳಿಂದ ಪಾರಾಗಲು ಕೆಲವರು ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ: ಬಿ.ಕೆ. ಹರಿಪ್ರಸಾದ್

Update: 2023-09-11 14:03 GMT

ಕೊಪ್ಪಳ: ನನ್ನ ವಿರುದ್ಧ ಹೈಕಮಾಂಡ್ ಗೆ ದೂರು ನೀಡುವವರು ಅದಕ್ಕೂ ಮೊದಲು ತಮ್ಮ ಮೇಲಿರುವ ಹಗರಣಗಳಿಂದ ಪಾರಾಗಲಿ. ಹಗರಣಗಳಿಂದ ಪಾರಾಗುವ ಸಲುವಾಗಿಯೇ ನನ್ನ ವಿರುದ್ಧ ಕೆಲವರು ಹೇಳಿಕೆ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.

ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ತಳಬಾಳ ಗ್ರಾಮದಲ್ಲಿ ಸೋಮವಾರ ಸಾಮೂಹಿಕ ವಿವಾಹ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯ ಉಸ್ತುವಾರಿಗೆ ದೂರು ನೀಡುವುದಾಗಿ ಕೆಲವರು ಹೇಳುತ್ತಿದ್ದಾರೆ. ದೂರು ಕೊಟ್ಟರೆ ಬಹಳ ಸಂತೋಷ. ಉಸ್ತುವಾರಿಗೆ ಮಾತ್ರ ಯಾಕೆ, ಎಲ್ಲರಿಗೂ ದೂರು ನೀಡಲಿ' ಎಂದು ಸವಾಲು ಹಾಕಿದರು.

ನನ್ನ ವಿರುದ್ಧ ದೂರು ನೀಡುವವರು ಮೊದಲು ತಾವು ಏನೆಂದು ತಿಳಿದುಕೊಳ್ಳಬೇಕು. ತಮ್ಮ ಮೇಲಿರುವ ಹಗರಣಗಳಿಂದ ಪಾರಾಗಲು ದೂರು ನೀಡುತ್ತಿದ್ದಾರೆ ಎಂದು ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ವಿರುದ್ಧ ಅಸಮಾಧಾನ ಹೊರಹಾಕಿದರು. ಅವರಿಗೆ ಹಗರಣಗಳಿಂದ ಪಾರಾಗುವ ಧೈರ್ಯವಿದ್ದರೆ ದೂರು ನೀಡುವ ಹೇಳಿಕೆಗಳನ್ನು ನಿರಂತರವಾಗಿ ನೀಡುತ್ತಲೇ ಇರಲಿ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೂರು ದಿನಗಳ ಹಿಂದೆ ಕೊಪ್ಪಳದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ತಿಂಗಳಲ್ಲಿ ಪತನವಾಗಲಿದೆ ಎಂದಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಹರಿಪ್ರಸಾದ್, 'ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಕಿತ್ತಾಟ ಇಲ್ಲ. ಆಂತರಿಕ ಪ್ರಜಾಪ್ರಭುತ್ವ ಇದೆ. ಅದರಂತೆ ಮುಕ್ತವಾಗಿ ಮಾತನಾಡುತ್ತೇನೆ. ಬಿಜೆಪಿ ನಾಯಕರ ಹಾಗೆ ನಾಗಪುರದಿಂದ ನಿರ್ದೇಶ ತೆಗೆದುಕೊಂಡು ಮಾತನಾಡುವುದಿಲ್ಲ' ಎಂದು ತಿರುಗೇಟು ನೀಡಿದರು.

ಈ ವೇಳೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News