ಕಾನೂನು ಬಾಹಿರವಾಗಿ ಮಗು ದತ್ತು ಪಡೆದ ಪ್ರಕರಣ: ಸೋನು ಶ್ರೀನಿವಾಸ್‍ಗೌಡಗೆ ಜಾಮೀನು ಮಂಜೂರು

Update: 2024-04-04 15:06 GMT

ಸೋನು ಶ್ರೀನಿವಾಸ್‍ಗೌಡ (Photo: instagram)

ಬೆಂಗಳೂರು: ಕಾನೂನು ಬಾಹಿರವಾಗಿ ಹೆಣ್ಣು ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಇನ್ಸ್ಟಾಗ್ರಾಂ ಸ್ಟಾರ್ ಸೋನು ಶ್ರೀನಿವಾಸ್‍ಗೌಡಗೆ ಜಾಮೀನು ಮಂಜೂರಾಗಿರುವುದಾಗಿ ವರದಿಯಾಗಿದೆ.

ರಾಯಚೂರಿನ ಕೂಲಿ ಕಾರ್ಮಿಕ ದಂಪತಿಯ ಹೆಣ್ಣು ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣದಲ್ಲಿ ಸೋನು ಶ್ರೀನಿವಾಸ್‍ಗೌಡ ಅವರನ್ನು ಮಾ.25ರಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾಗ ವಿಚಾರಣೆ ಮಾಡಿದ ನ್ಯಾಯಾಧೀಶರು 5 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.

ಆದರೆ, ಐದು ದಿನಗಳಲ್ಲಿ ವಿಚಾರಣೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮತ್ತಷ್ಟು ಕಾಲಾವಕಾಶವನ್ನು ಪೊಲೀಸರು ಕೇಳಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರ ಪರವಾಗಿ ವಾದ ಆಲಿಸಿದ ನ್ಯಾಯಾಲಯದಿಂದ ಸೋನು ಶ್ರೀನಿವಾಸ್‍ಗೌಡ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಂತರ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿತ್ತು.

ನ್ಯಾಯಾಂಗ ಬಂಧನದಲ್ಲಿದ್ದ ಸೋನು ಶ್ರೀನಿವಾಸ್‍ಗೌಡ ಅವರು ಜಾಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ವಿಚಾರಣೆ ಮಾಡಿದ ಬೆಂಗಳೂರು ಗ್ರಾಮಾಂತರ ಸಿಜೆಎಂ ನ್ಯಾಯಾಲಯವು ಕೆಲವು ಷರತ್ತುಗಳೊಂದಿಗೆ ಸೋನು ಶ್ರೀನಿವಾಸ್‍ಗೌಡ ಅವರಿಗೆ ಜಾಮೀನು ಮಂಜೂರು ಮಾಡಿದೆ. ಅವರ ಪರವಾಗಿ ವಕೀಲ ಪ್ರಕಾಶ್ ವಾದ ಮಂಡಿಸಿದ್ದಾರೆ ಎಂದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News