ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ಯತ್ನಾಳ್ ಅಸಮಾಧಾನ ಸ್ಫೋಟ

Update: 2023-11-17 11:36 GMT

ಬೆಂಗಳೂರು, ನ.17: ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ವಿಜಯಪುರ ಶಾಸಕ, ಬಿಜೆಪಿಯ ಅತೃಪ್ತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ತೋಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾವುದೋ ಒಂದು ಕುಟುಂಬದ ಪಕ್ಷವಲ್ಲ. ಇದನ್ನು ನಾವು ಕೂಡ ಒಪ್ಪುವುದಿಲ್ಲ. ಬಿಜೆಪಿಗಾಗಿ, ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ನಾನು ಪ್ರಾಣ ಕೊಡಲೂ ಸಿದ್ಧ. ಆದರೆ ಕೆಲ ಚೇಲಾಗಳ ಮಾತು ಕೇಳಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳಬಾರದು ಎಂದು ಹೇಳಿದರು.

ಯಡಿಯೂರಪ್ಪ, ವಿಜಯೇಂದ್ರರಿಂದ ಯತ್ನಾಳ್ ಸಂಪರ್ಕ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಕೆಲಸ ಇದ್ದಾಗ ಮಾಡುತ್ತಾರೆ, ಮುಂದೆ ತುಳಿಯುವ ಕೆಲಸಕ್ಕಾಗಿ ನನಗೆ ಕರೆ ಮಾಡುತ್ತಾರೆ. ನನ್ನಂತಹ ಬಡಪಾಯಿ ಮನೆಗೆ ವೀಕ್ಷಕರು ಬಂದಿದ್ದರು. ಅದೇ ಯಡಿಯೂರಪ್ಪ ಮನೆಗೆ ಹೋಗಿದ್ದರೆ ಬೆಳ್ಳಿ ತಟ್ಟೆ ಊಟ ಸಿಕ್ತಿತ್ತು ಎಂದು ವ್ಯಂಗ್ಯವಾಡಿದರು.

ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆ, ಚುನಾವಣೆಯಲ್ಲಿ ಯಾರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ, ಒಂದು ವರ್ಗದ ಕೇಂದ್ರೀಕೃತವಾಗಿ ಮಾಡಿದ್ದರು ಎಂದು ವಿವರಿಸಿದ್ದೇನೆ ಎಂದ ಯ್ನಾಳ್, ವರಿಷ್ಠರು ಕೆಲವೇ ಚೇಲಾಗಳ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳಬಾರದು ಎಂದರು.

ವಿಪಕ್ಷ ನಾಯಕ ಉತ್ತರ ಕರ್ನಾಟಕ್ಕೆ ಕೊಡಬೇಕು, ಅದರಲ್ಲಿ ರಾಜಿ ಇಲ್ಲ. ದಕ್ಷಿಣ ಕರ್ನಾಟಕದವರೇ ಆಗಬೇಕಾ? ಎಂದು ಪ್ರಶ್ನಿಸಿದ ಯತ್ನಾಳ್, ಉತ್ತರ ಕರ್ನಾಟಕಕ್ಕೆ ಅವಕಾಶ ಕೊಡದಿದ್ದರೆ ಜನ ತೀರ್ಮಾನ ಮಾಡುತ್ತಾರೆ, ಆಗ ನಾವೂ ತೀರ್ಮಾನ ಮಾಡುತ್ತೇವೆ ಎಂದು ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News