SP, DCP, IGಗಳು ತಮ್ಮ ವ್ಯಾಪ್ತಿಯ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ : ಸಿಎಂ ಸಿದ್ದರಾಮಯ್ಯ

Update: 2024-07-06 09:30 GMT

ಬೆಂಗಳೂರು : ಪ್ರತೀ ಎಸ್ಪಿ, ಡಿಸಿಪಿ, ಐಜಿಗಳು ಪೊಲೀಸ್ ಮ್ಯಾನ್ಯುಯಲ್ ತಮ್ಮ ವ್ಯಾಪ್ತಿಯ ಪ್ರಕಾರ ಪ್ರತೀ ಠಾಣೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಸೂಚನೆ ನೀಡಿದರು.

ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ 2024ರ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಷವನ್ನು ಉದ್ಘಾಟಿಸಿ, ನೂತನ ತಂತ್ರಾಂಶಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

"ನಿಮ್ಮ ವ್ಯಾಪ್ತಿಯಲ್ಲಿ ಕ್ಲಬ್ ಗಳು, ಇಸ್ಪೀಟ್, ಬೆಟ್ಟಿಂಗ್, ಡ್ರಗ್ಸ್ ಗಳನ್ನು ನಿಲ್ಲಿಸದಿದ್ದರೆ ಎಸ್ಪಿ ಮತ್ತು‌ ಐಜಿ ಮಟ್ಟದ ಅಧಿಕಾರಿಗಳನ್ನೂ ನೇರ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು.ಎಸ್ಪಿ,ಐಜಿಗಳು ಪ್ರತಿ ಠಾಣೆಗಳಿಗೆ ಹೋಗಿ ಪರಿಶೀಲನೆ ನಡೆಸಿದರೆ ಇವನ್ನೆಲ್ಲಾ ತಪ್ಪಿಸಬಹುದು. ನಾಳೆಯಿಂದಲೇ ಎಸ್ಪಿ,ಐಜಿಗಳು ಠಾಣೆಗಳಿಗೆ ಭೇಟಿ ನೀಡಬೇಕು. ಭೇಟಿ ನೀಡಿ ಅರ್ಧಗಂಟೆಯಲ್ಲಿ ಶಾಸ್ತ್ರ ಮುಗಿಸಬಾರದು. ಕೂಲಂಕುಶ ಪರಿಶೀಲನೆ ನಡೆಸಬೇಕು ಎಂದು ಎಚ್ಚರಿಸಿದರು.

ಫೇಕ್ ನ್ಯೂಸ್ ಪ್ರಸಾರ ತಡೆಗಟ್ಟಿ :

ಫೇಕ್ ನ್ಯೂಸ್‌ಗಳು ಸಮಾಜದ ನೆಮ್ಮದಿಗೆ ಕಂಟಕವಾಗಿವೆ. ಇವು ವಿಪರೀತ ಹೆಚ್ಚಾಗುತ್ತಿವೆ. ಇವುಗಳ ತಡೆಗೆ ʼಫ್ಯಾಕ್ಟ್‌ ಚೆಕ್ ʼ ಘಟಕಗಳನ್ನು ಮಾಡಿದ್ದೇವೆ. ಆದರೂ ಫೇಕ್ ನ್ಯೂಸ್‌ಗಳು ಹೆಚ್ಚಾಗುತ್ತಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಸದ್ಯ ಫೇಕ್ ನ್ಯೂಸ್ ತಡೆಯಲು ಆಗುತ್ತಿರುವ ಕೆಲಸ ಸಾಲುತ್ತಿಲ್ಲ ಎಂದು ಎಚ್ಚರಿಸಿದರು.

ಡ್ರಗ್ಸ್ ಪೂರ್ತಿ ನಿಂತಿಲ್ಲ ಏಕೆ? :

ಡ್ರಗ್ಸ್ ಮಾರಾಟ ಮಾಡುವವರು ಯಾರು?. ರೌಡಿಗಳು, ರಿಯಲ್ ಎಸ್ಟೇಟ್ ಮಾಡುವವರು ಯಾರು ಎನ್ನುವುದು ಆಯಾ ಠಾಣಾಧಿಕಾರಿಗಳಿಗೆ ಗೊತ್ತಿರುತ್ತದೆ. ಆದರೂ ಯಾಕೆ ನಿಲ್ಲುತ್ತಿಲ್ಲ‌ ಎಂದು ಪ್ರಶ್ನಿಸಿದರು.

ನಿಮಗೆ ಗನ್ ಗಳನ್ನು ಕೊಟ್ಟಿರುವುದು ಏಕೆ ?. ಈ ಬಗ್ಗೆ ರೌಡಿಗಳಿಗೆ ಏಕೆ ಭಯವಿಲ್ಲ?. ರೌಡಿಗಳಿಗೆ ಪೊಲೀಸ್ ಭಯ ಇರಬೇಕು ಎಂದು ಎಚ್ಚರಿಸಿದರು.

Delete Edit
Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News