"ನಾನಿರುವುದೇ ನಿಮಗಾಗಿ" : ಮುಂಗಾರು ಅಧಿವೇಶನದಲ್ಲಿ ಗಮನ ಸೆಳೆದ 'ಸ್ಪೀಕರ್ ಖಾದರ್'

Update: 2024-07-20 17:54 GMT

ಸ್ಪೀಕರ್‌ ಯು. ಟಿ. ಖಾದರ್‌

ಬೆಂಗಳೂರು, ಜು. 20 : ವಿಧಾನ ಸೌಧದ ಪಶ್ಚಿಮ ದ್ವಾರಕ್ಕೆ ಹೊಸ ಆಕರ್ಷಕ ರೂಪ ಕೊಟ್ಟಿದ್ದಕ್ಕೆ ಹಾಗು ವಿಧಾನ ಸೌಧದ ಮುಂಭಾಗದಲ್ಲಿ ಸಂವಿಧಾನದ ಪೀಠಿಕೆಯನ್ನು ಅಳವಡಿಸಿದ್ದಕ್ಕೆ ಮೊದಲ ದಿನವೇ ಮುಖ್ಯಮಂತ್ರಿಗಳಿಂದ, ವಿಪಕ್ಷ ನಾಯಕರಿಂದ, ಆಡಳಿತ ಹಾಗು ವಿಪಕ್ಷಗಳ ಶಾಸಕರಿಂದ ಸರಣಿ ಅಭಿನಂದನೆ , ಆಮೇಲೆ ವಾರವಿಡೀ ಸದನದಲ್ಲಿ ಆಡಳಿತ ಪಕ್ಷ , ವಿಪಕ್ಷ ಎನ್ನದೆ ಸದನದ ಚರ್ಚೆಯ ಹಾದಿ ತಪ್ಪಿಸುವ, ಸಮಯ ವ್ಯರ್ಥ ಮಾಡುವ ಶಾಸಕರಿಗೆ ನಿಯಮದ ಪಾಠ ಹೇಳಿ ಸುಮ್ಮನಾಗಿಸುವ ಖಡಕ್ ಶೈಲಿ, ಅಲ್ಲಲ್ಲಿ ತಮಾಷೆ , ಆಗಾಗ ಗರಂ - ಹೀಗೆ ಮುಂಗಾರು ಅಧಿವೇಶನದ ಮೊದಲ ವಾರದುದ್ದಕ್ಕೂ ಸ್ಪೀಕರ್ ಯು ಟಿ ಖಾದರ್ ಅವರೇ ಎಲ್ಲರ ಗಮನ ಸೆಳೆದಿದ್ದಾರೆ.

" ಈಗ ಇಲ್ಲಿ ಏನ್ ನಿಯಮ ಗೊತ್ತಾ... ಇಲ್ಲಿ ಅಧ್ಯಕ್ಷರು ಹೇಳಿದ ಹಾಗೆ ಕೇಳ್ಬೇಕು " ಇದು ಆಡಳಿತ ಪಕ್ಷದ ಹಿರಿಯ ಶಾಸಕ ಶಿವಲಿಂಗೇಗೌಡ ಅವರನ್ನು ಮೊನ್ನೆ ವಿಧಾನಸಭೆಯಲ್ಲಿ ಸ್ಪೀಕರ್ ಯು ಟಿ ಖಾದರ್ ಅವರು ಸುಮ್ಮನಾಗಿಸಿದ ರೀತಿ. ಆಡಳಿತ ಪಕ್ಷದ ಇನ್ನೊಬ್ಬ ಶಾಸಕ ಪ್ರದೀಪ್ ಈಶ್ವರ್ ಅವರೂ ತೀರಾ ಆಕ್ರಮಣಕಾರಿ ಶೈಲಿಯಲ್ಲಿ ಮಾತಾಡಲು ಹೋದಾಗ ಸ್ಪೀಕರ್ ಖಾದರ್ ರಿಂದ ಸರಿಯಾಗಿಯೇ ಪಾಠ ಹೇಳಿಸಿಕೊಂಡರು. ವಾಲ್ಮೀಕಿ ಹಗರಣದ ಬಗ್ಗೆ ಚರ್ಚೆಗೆ ವಿಪಕ್ಷ ನಾಯಕ ಆರ್ ಅಶೋಕ್ ಪಟ್ಟು ಹಿಡಿದಾಗ " ವಿಪಕ್ಷ ನಾಯಕರೇ, ನಾನಿರುವುದೇ ನಿಮಗಾಗಿ " ಎಂದು ಹೇಳಿ ಕಲಾಪ ಮುಂದುವರಿಸಲು ಹೇಳಿದರು ಸ್ಪೀಕರ್ ಖಾದರ್.

ಮಂಗಳೂರು ಕ್ಷೇತ್ರದ ಶಾಸಕ, ಮಾಜಿ ಸಚಿವ ಯು‌.ಟಿ.ಖಾದರ್ ಅವರು ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದಾಗ, ಅವರು ಸದನವನ್ನು ದಕ್ಷವಾಗಿ ನಿಭಾಯಿಸಬಲ್ಲರೆ ಎಂಬ ಅನುಮಾನ ರಾಜಕೀಯ ಹಾಗು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಅದಕ್ಕೆ ಕಾರಣವೂ ಇತ್ತು. ವಿಧಾನಸಭೆಯ ಸ್ಪೀಕರ್ ಉತ್ತಮ ವಾಗ್ಮಿಯೂ, ಸದನವನ್ನು ಸಮತೋಲಿತವಾಗಿ ನಿಭಾಯಿಸಬಲ್ಲ ಚಾಕಚಕ್ಯತೆ ಉಳ್ಳವರೂ, ಸಂಸದೀಯ ಕಾನೂನುಗಳ ಆಳವಾದ ಜ್ಞಾನ ಇರುವವರೂ ಆಗಿರಬೇಕಾಗುತ್ತದೆ. ಈ ಹಿಂದೆ ತಮ್ಮ ವಾಕ್ಚಾತುರ್ಯ , ಸದನವನ್ನು ನಿಭಾಯಿಸುವ ಚಾಕಚಕ್ಯತೆಯಿಂದಾಗಿಯೇ ಉತ್ತಮ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯರ ದಾಖಲೆ ಖಾದರ್ ಅವರ ಮುಂದಿತ್ತು. ಅದೇ ರೀತಿಯ ಸಮರ್ಥ ನಿರ್ವಹಣೆಯನ್ನು ತೋರಿಸುವ ಸವಾಲು ಎದುರಾಗಿತ್ತು.

 

ಈಗ ಒಂದು ವರ್ಷದೊಳಗೆ ಎಲ್ಲ ಆಶಂಕೆಗಳನ್ನು ಹುಸಿಗೊಳಿಸಿರುವ ಸ್ಪೀಕರ್ ಯು.ಟಿ.ಖಾದರ್, ತಮ್ಮ ಸಮಯೋಚಿತ ಮಾತು, ಮಧ್ಯಪ್ರವೇಶ, ಬೇಕಾದಾಗ ಖಡಕ್ ನುಡಿ ಹಾಗೂ ಹಾಸ್ಯ ಚಟಾಕಿಗಳ ಮೂಲಕ ಕೇವಲ ಒಂದೇ ವರ್ಷದಲ್ಲಿ ಸ್ಪೀಕರ್ ಸ್ಥಾನಕ್ಕೆ ಖದರ್ ತಂದಿದ್ದಾರೆ. ಕಲಾಪ ನಡೆಯುವಾಗ ಸದನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಯಶಸ್ವಿಯಾಗಿ ನಡೆಸಿ ಗಮನ ಸೆಳೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್, ಈ ಹಿಂದಿನ ಸರಕಾರಗಳಲ್ಲಿ ಮೂರು ಪ್ರಮುಖ ಖಾತೆಗಳನ್ನು ನಿಭಾಯಿಸಿದ ಅನುಭವಿ. ಅಷ್ಟೇನೂ ವಾಚಾಳಿಯಲ್ಲದ ಯು.ಟಿ.ಖಾದರ್, ಸಚಿವರಾಗಿದ್ದಾಗ ತಮ್ಮ ಕ್ರೀಯಾಶೀಲತೆಯಿಂದಲೇ ಹೆಸರು ಮಾಡಿದವರು. ಸ್ಪೀಕರ್ ಹುದ್ದೆಗೆ ತಮ್ಮ ಹೆಸರು ಮುಂಚೂಣಿಗೆ ಬಂದಾಗ, ಮೊದಲಿಗೆ ಹಿಂಜರಿದಿದ್ದರು. ಆದರೆ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಹಿರಿಯ ಸಚಿವರು ಮನವೊಲಿಸಿದ ನಂತರ ಅವರು ಸ್ಪೀಕರ್ ಸ್ಥಾನ ಒಪ್ಪಿಕೊಂಡಿದ್ದರು.

ಆದರೆ 'ಸ್ಪೀಕರ್ ಖಾದರ್' ಈಗ ಸದನ ನಡೆಯುವ ಎಲ್ಲ ದಿನಗಳಲ್ಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಸದನದ ಅಜೆಂಡಾ ಹಾದಿ ತಪ್ಪದಂತೆ ನೋಡಿಕೊಳ್ಳುವುದು, ಚರ್ಚೆ ಹಳಿ ತಪ್ಪುವ ಲಕ್ಷಣ ಕಂಡ ಕೂಡಲೇ ಮತ್ತೆ ಅದನ್ನು ವಾಪಸ್ ಹಳಿಗೆ ತರುವುದು, ಹಿರಿಯ ಶಾಸಕರು, ಸಚಿವರನ್ನು ನಿಭಾಯಿಸುವುದು, ಕಿರಿಯರಿಗೆ ಆಗಾಗ ಪಾಠ ಹೇಳುವುದು, ತೀರಾ ಕಿರಿಕ್ ಮಾಡುವವರಿಗೆ ಮುಲಾಜಿಲ್ಲದೆ ಜೋರು ಮಾಡಿ ಕೂರಿಸುವುದು, ಅಲ್ಲಲ್ಲಿ ಸಣ್ಣ ಪುಟ್ಟ ಹಾಸ್ಯ ಚಟಾಕಿಗಳನ್ನು ಹಾರಿಸುವುದು - ಹೀಗೆ ಅಧಿವೇಶನದುದ್ದಕ್ಕೂ ಸಿಎಂ ಹಾಗು ವಿಪಕ್ಷ ನಾಯಕರಷ್ಟೇ ಚರ್ಚೆಯಲ್ಲಿರುತ್ತಾರೆ ಸ್ಪೀಕರ್ ಖಾದರ್.

ಜೊತೆಗೆ ಸ್ಪೀಕರ್ ಆಗಿ ಸದನದ ಒಳ ಹೊರಗಿನ ಸೌಂದರ್ಯ ಹೆಚ್ಚಿಸುವುದು, ಶಾಸಕರ ಹಿತಾಸಕ್ತಿಯನ್ನು ಕಾಪಾಡುವುದು, ಕಿರಿಯ ಶಾಸಕರಿಗೆ ಸದನದ ಚರ್ಚೆಯಲ್ಲಿ ಹೆಚ್ಚೆಚ್ಚು ಭಾಗವಹಿಸಲು ಪ್ರೇರೇಪಿಸುವುದು, ಸಮಯಕ್ಕೆ ಸರಿಯಾಗಿ ಬರುವ ಶಾಸಕರನ್ನು ಬಹುಮಾನ ಕೊಟ್ಟು ಗೌರವಿಸುವುದು - ಹೀಗೆ ಹತ್ತು ಹಲವು ವಿನೂತನ ಕ್ರಮಗಳ ಮೂಲಕವೂ 'ಸ್ಪೀಕರ್ ಖಾದರ್' ಸರ್ವ ಪಕ್ಷಗಳ ಶಾಸಕರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ವಿಧಾನ ಸೌಧ ಕೇವಲ ಮಂತ್ರಿಗಳು, ಶಾಸಕರು, ಅಧಿಕಾರಿಗಳಿಗೆ ಸೀಮಿತ ಅಲ್ಲ, ಅದು ಈ ರಾಜ್ಯದ ಪ್ರತಿಯೊಬ್ಬ ಪ್ರಜೆಗೆ ಸೇರಿದ್ದು, ಅವರೆಲ್ಲರೂ ಇದು ನಮ್ಮದೇ ಸೌಧ ಎಂಬ ಭಾವನೆಯಲ್ಲಿ ಇಲ್ಲಿಗೆ ಬರುವಂತಾಗಬೇಕು ಎಂದು ವಿಧಾನ ಸೌಧದಲ್ಲಿ ಜನರೂ ಬಂದು ಭಾಗವಹಿಸುವಂತಹ ವಿವಿಧ ಕಾರ್ಯಕ್ರಮಗಳನ್ನು, ಸ್ಪರ್ಧೆಗಳನ್ನೂ ಆಯೋಜಿಸಿದ್ದಾರೆ ಸ್ಪೀಕರ್ ಖಾದರ್.

 

ಶಾಸಕರಿಗೆ ವೇತನ ಭತ್ತೆ ಹೆಚ್ಚಿಸುವ ವಿಷಯ, ಅವರ ಪ್ರವಾಸದ ವಿಷಯದಲ್ಲಿ ಟೀಕೆ ಬಂದಾಗ " ನೀವು ಶಾಸಕರನ್ನು ನಿಮ್ಮ ಸೋದರರಂತೆ ನೋಡಿ, ಪರಕೀಯರಂತೆ ನೋಡಬೇಡಿ, ಅವರಿಗೂ ಸಾಕಷ್ಟು ಸಮಸ್ಯೆಗಳು ಇರುತ್ತವೆ, ಅವರು ಜನರ ಸೇವೆ ಮಾಡಲು ಅವರಿಗೂ ಸೌಲಭ್ಯ ಕೊಡಬೇಕಾಗುತ್ತೆ " ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದರು ಸ್ಪೀಕರ್ ಖಾದರ್.

ವಿಪಕ್ಷಗಳು ಸ್ಪೀಕರ್ ಎದುರಿನ ಬಾವಿಗಿಳಿದು, ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವಾಗ, ರಾಜ್ಯದಲ್ಲಿ ಏರ್ಪಟ್ಟಿರುವ ಗಂಭೀರ ಸ್ವರೂಪದ ಪ್ರವಾಹ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಲು ಅವರು ಅನುವು ಮಾಡಿಕೊಟ್ಟ ರೀತಿ ಏಕಪಕ್ಷೀಯವಾಗಿತ್ತು ಎಂಬ ಟೀಕೆಗೂ ಸ್ಪೀಕರ್ ಗುರಿಯಾಗಿದ್ದರು. ಸಭಾಧ್ಯಕ್ಷರಾದವರು ಆಡಳಿತ ಪಕ್ಷಕ್ಕೇ ಹೆಚ್ಚು ಆದ್ಯತೆ ನೀಡುತ್ತಾರೆ ಎಂಬ ಅಪವಾದ ಮೊದಲಿನಿಂದಲೂ ಇದೆ. ಆದರೆ, ಆ ಅಪವಾದವನ್ನು ಸುಳ್ಳು ಮಾಡಿರುವ ಖಾದರ್, ವಿಪಕ್ಷಗಳಿಗೂ ಸಮಾನ ಅವಕಾಶ ನೀಡುವ ಮೂಲಕ ಎಲ್ಲರ ಮೆಚ್ವುಗೆಗೆ ಪಾತ್ರರಾಗಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News