ಒಂದು ದಿನದ ಮುನ್ನವೇ ಅಧಿವೇಶನ ಕೊನೆಗೊಂಡಿರುವುದು ಬೇಸರದ ಸಂಗತಿ : ಸ್ಪೀಕರ್ ಯು.ಟಿ.ಖಾದರ್

Update: 2024-07-26 14:11 GMT

ಯು.ಟಿ.ಖಾದರ್

ಬೆಂಗಳೂರು : ಒಂದು ದಿನದ ಮುನ್ನವೇ ಅಧಿವೇಶನ ಕೊನೆಗೊಂಡಿರುವುದು ಬೇಸರದ ಸಂಗತಿ. ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ, ಮತ್ತಿತರ ಸಮಸ್ಯೆಗಳ ಕುರಿತು ಚರ್ಚೆ ಆಗಲಿಲ್ಲ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಬೇಸರ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 16ನೆ ವಿಧಾನಸಭೆಯ 4ನೆ ಅಧಿವೇಶನವೂ ಒಟ್ಟು 8 ದಿನಗಳ ಕಾಲ ನಡೆದಿದ್ದು, ಒಟ್ಟು 37 ಗಂಟೆಯವರೆಗೆ ಕಾರ್ಯಕಲಾಪ ನಡೆಸಲಾಗಿದೆ ಎಂದರು.

ನಿಯಮ 60ರ ಅಡಿ ನೀಡಿದ್ದ 9 ಸೂಚನೆಗಳ ಪೈಕಿ 8 ಅನ್ನು ನಿಯಮ 69ಕ್ಕೆ ಪರಿವರ್ತಿಸಲಾಗಿದ್ದು, 1 ಸೂಚನೆಯನ್ನು ತಿರಸ್ಕರಿಸಲಾಗಿದೆ. ಎರಡು ಸೂಚನೆಗಳನ್ನು ಚರ್ಚಿಸಲಾಗಿದೆ. ನಿಯಮ 69ರಡಿಯಲ್ಲಿ ಒಟ್ಟು 14 ಸೂಚನೆಗಳನ್ನು ಸ್ವೀಕರಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು 16 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.

ಒಟ್ಟು 2370 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 135 ಪ್ರಶ್ನೆಗಳ ಪೈಕಿ 117 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 1,902 ಪ್ರಶ್ನೆಗಳ ಪೈಕಿ 1,438 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು.

ನಿಯಮ 351 ರಡಿಯಲ್ಲಿ ಸ್ವೀಕೃತವಾದ 154 ಸೂಚನೆಗಳ ಪೈಕಿ 72 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 323 ಸೂಚನೆಗಳ ಪೈಕಿ 170 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಶೂನ್ಯ ವೇಳೆಯಲ್ಲಿ 3 ಸೂಚನೆಗಳನ್ನು ಚರ್ಚಿಸಲಾಗಿದೆ. ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭೆ ಸ್ಥಾನಗಳ ಮತ್ತು ಪ್ರತಿ ರಾಜ್ಯದ ವಿಧಾನಸಭೆಗೆ ನಿಗದಿಪಡಿಸಬೇಕಾದ ಸ್ಥಾನಗಳ ಸಂಖ್ಯೆಯನ್ನು 1971ರ ಜನಗಣತಿಯನ್ನಾಧರಿಸಿ ನಿರ್ಧರಿಸಬೇಕೆಂಬ ಕುರಿತು, ಒಂದು ರಾಷ್ಟ್ರ ಒಂದು ಚುನಾವಣೆ' ಪ್ರಸ್ತಾವವು ಭಾರತದ ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ವ್ಯವಸ್ಥೆಗೆ ಅಪಾಯವನ್ನುಂಟು ಮಾಡುವುದರಿಂದ ಈ ಪ್ರಸ್ತಾವವನ್ನು ಅನುಷ್ಠಾನಗೊಳಿಸಬಾರದೆಂಬ ಬಗ್ಗೆ ನಿರ್ಣಯಗಳನ್ನು ಸದನದಲ್ಲಿ ಮಂಡಿಸಲಾಗಿದೆ ಎಂದರು.

ಅದೇ ರೀತಿ, ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಆಗುತ್ತಿರುವ ಅಕ್ರಮಗಳನ್ನು ಪರಿಗಣಿಸಿ ರಾಷ್ಟ್ರೀಯ ಮಟ್ಟದಲ್ಲಿ ನೀಟ್ ಪರೀಕ್ಷೆಯನ್ನು ರದ್ದುಪಡಿಸುವ ಬಗ್ಗೆ, ಅರಣ್ಯವಾಸಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮ, 2006ರಡಿಯಲ್ಲಿ ಮಾಡಲಾದ ನಿಯಮಗಳನ್ನು ಸೂಕ್ತವಾಗಿ ಮತ್ತು ಸಮರ್ಪಕವಾಗಿ ಮಾರ್ಪಡಿಸುವ ಕುರಿತಂತೆ ಅಧಿಕೃತ ನಿರ್ಣಯಗಳನ್ನು ಸದನದಲ್ಲಿ ಮಂಡಿಸಿ, ಸದನದಲ್ಲಿ ಅವುಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಹೇಳಿದರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಈ ಅವಧಿಯಲ್ಲಿ ಒಟ್ಟು 1,251 ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. ಸದನದಲ್ಲಿ ಉತ್ತರಿಸಬೇಕಿದ್ದ ಒಟ್ಟು 135 ಪ್ರಶ್ನೆಗಳ ಪೈಕಿ ಒಟ್ಟು 90 ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಲಿಖಿತ ಮೂಲಕ ಉತ್ತರಿಸುವ ಒಟ್ಟು 1,116 ಪ್ರಶ್ನೆಗಳ ಪೈಕಿ 348 ಪ್ರಶ್ನೆಗಳಿಗೆ ಉತ್ತರಗಳನ್ನು ಮಂಡಿಸಲಾಯಿತು. ನಿಯಮ 59ರಡಿಯಲ್ಲಿ ಒಟ್ಟು 5 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 01 ನಿಯಮ 68ಕ್ಕೆ ಪರಿವರ್ತಿಸಿ ಚರ್ಚಿಸಿ ಸರಕಾರದಿಂದ ಉತ್ತರಿಸಲಾಯಿತು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News