ಲೋಕಸಭೆ, ವಿಧಾನಸಭೆಗಳಲ್ಲಿ ಸಮಸ್ಯೆ ಆಧಾರಿತ ಚರ್ಚೆಗಳಾಗಬೇಕು : ಸ್ಪೀಕರ್ ಯು.ಟಿ.ಖಾದರ್

Update: 2024-09-23 16:21 GMT

ಹೊಸದಿಲ್ಲಿ: ‘ಇತ್ತೀಚಿನ ಜಾಗತಿಕ ಅಂಕಿ-ಅಂಶಗಳ ಪ್ರಕಾರ, ಭಾರತವು ಸುಮಾರು 356 ಮಿಲಿಯನ್ ಯುವಕರನ್ನು ಹೊಂದಿದ್ದು, ದೇಶವನ್ನು ‘ಯಂಗ್ ಇಂಡಿಯಾ’ ಎಂದು ಕರೆಯಲಾಗುತ್ತಿದೆ. ಹೀಗಾಗಿ ಲೋಕಸಭೆ, ವಿಧಾನಸಭೆಗಳಲ್ಲಿ ಸಮಸ್ಯೆ ಆಧಾರಿತ ಚರ್ಚೆ-ವಾದಗಳ ಮಂಡನೆಯಾಗಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಇಂದಿಲ್ಲಿ ಪ್ರತಿಪಾದಿಸಿದ್ದಾರೆ.

ಸೋಮವಾರ ದಿಲ್ಲಿಯ ಸಂಸತ್ ಭವನದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯಲ್ಲಿ ಜರುಗಿದ ಕಾಮನ್‌ ವೆಲ್ತ್ ಸಂಸದೀಯ ಸಂಘ ಭಾರತ ವಲಯದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸಂಸತ್ತು ಮತ್ತು ವಿಧಾನಸಭೆ ಹಾಗೂ ವಿಧಾನ ಪರಿಷತ್‍ನ ಕಾರ್ಯ ಚಟುವಟಿಕೆಗಳ ಬಗ್ಗೆ ಯುವಜನರು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದ್ದು, ಇಂಡಿಯನ್ ಯೂತ್ ಪಾರ್ಲಿಮೆಂಟ್ ಇವುಗಳನ್ನು ಅರಿಯುವ ಮಾದರಿ ವೇದಿಕೆಯಾಗಬೇಕು ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಾರ್ಷಿಕ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸುವುದನ್ನು ಕಡ್ಡಾಯಗೊಳಿಸಬೇಕು. ಶಾಸನಸಭೆಗಳು ಜನಸಾಮಾನ್ಯರ ಬದುಕಿನ ಸಮಸ್ಯೆಗಳ ಕುರಿತು ಚರ್ಚಿಸುವ ಸೂಕ್ತ ವೇದಿಕೆಯಾಗಿವೆ. ಆದ್ದರಿಂದ ಪ್ರತಿವರ್ಷವೂ ಶಾಸನಸಭೆಗಳು ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಿ ಪ್ರಜಾಪ್ರಭುತ್ವದ ಸಾರ್ಥಕತೆಗೆ ಮುಂದಾಗುವಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭೆ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್, ರಾಜಸ್ಥಾನದ ರಾಜ್ಯಪಾಲ ಹರಿಬಾವು ಕಿಶಾನರಾವ್ ಬಾಗ್ದೆ ಹಾಗೂ ರಾಜಸ್ಥಾನ ವಿಧಾನಸಭೆ ಸ್ಪೀಕರ್ ವಾಸುದೇವ್ ದೇವನಾನಿ, ಇಂಡಿಯನ್ ಯೂತ್ ಪಾರ್ಲಿಮೆಂಟ್‍ನ ರಾಷ್ಟ್ರೀಯ ಸಂಚಾಲಕ ಅಶುತೋಷ್ ಜೋಶ್, ಉಭಯ ಸದನದ ಕಾರ್ಯದರ್ಶಿಗಳಾದ ಕೆ.ಆರ್.ಮಹಾಲಕ್ಷ್ಮಿ, ವಿಶಾಲಾಕ್ಷಿ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News