‌ಕರ್ನಾಟಕದಲ್ಲಿರುವುದು ಸ್ಟಾಲಿನ್‌ ಅವರ ಗುಲಾಮ ಸರಕಾರ: ಬಿಜೆಪಿ ವಾಗ್ದಾಳಿ

Update: 2023-09-22 06:28 GMT

ಬೆಂಗಳೂರು: ʼʼಕನ್ನಡಿಗರ ಪೌರುಷ, ಕನ್ನಡಿಗರ ಸಾಹಸ, ಕನ್ನಡಿಗರ ಸ್ವಾಭಿಮಾನ, ಕನ್ನಡದ ಆಸ್ಮಿತೆಯನ್ನು ಕಾಂಗ್ರೆಸ್‌ ಕೇವಲ ರಾಜಕೀಯ ಅಸ್ತ್ರವಾಗಿಸಿಕೊಂಡು ಕಿವಿ ಮೇಲೆ ಹೂವಿಟ್ಟು ಅಣಕಿಸುತ್ತಿದೆ. ಕರ್ನಾಟಕದಲ್ಲಿರುವುದು ಸ್ಟಾಲಿನ್‌ ಅವರ ಗುಲಾಮ ಸರ್ಕಾರ. ಕನ್ನಡ, ಕರ್ನಾಟಕ, ನಾಡ ವಿರೋಧಿ ಕಾಂಗ್ರೆಸ್ಸಿಗೆ ಕನ್ನಡಿಗರು ಧಿಕ್ಕಾರ ಹಾಕುತ್ತಿದ್ದಾರೆʼʼ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಶುಕ್ರವಾರ ಪ್ರತಿಕ್ರಿಯಿಸಿರುವ ಬಿಜೆಪಿ (@BJP4Karnataka) ʼʼಕಾವೇರಿಯನ್ನು ತಮಿಳುನಾಡಿಗೆ ಬಿಟ್ಟು ಕನ್ನಡಿಗರ ಮಾನವನ್ನು ಕಾಂಗ್ರೆಸ್ ಸರ್ಕಾರ ಹರಾಜು ಹಾಕಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದೆ. 

ʼʼಚುನಾವಣೆಗೂ ಮುನ್ನ ಕನ್ನಡಿಗರ ಆಸ್ಮಿತೆಯನ್ನು ಮುಂದೆ ಇಟ್ಟುಕೊಂಡು ಒಣ ರಾಜಕೀಯ ಮಾಡಿದ್ದ ಕಾಂಗ್ರೆಸ್‌ ಇಂದು ಕರ್ನಾಟಕಕ್ಕೆ ಮಹಾ ದ್ರೋಹವೆಸಗುತ್ತಿದೆʼʼ ಎಂದು ಬಿಜೆಪಿ ಕಿಡಿಕಾರಿದೆ. 

ʼʼಆಗ, ಸೇವ್ ನಂದಿನಿ ಅಂತ ಸುಳ್ಳು ಸುದ್ದಿ ಸೃಷ್ಟಿಸಿ ಕನ್ನಡಿಗರ ದಾರಿ ತಪ್ಪಿಸಲಾಯಿತು. ಹಿಂದಿ ಹೇರಿಕೆಯೆಂದು ಹುಸಿ ಪುಕಾರು ಹಬ್ಬಿಸಿ ಪ್ರಚಾರಗಿಟ್ಟಿಸಿಕೊಳ್ಳಲಾಯಿತು.ಮೇಕೆದಾಟು ವಿಚಾರ ನ್ಯಾಯಾಲಯದಲ್ಲಿದ್ದರೂ ಪಾದಯಾತ್ರೆಯ ನಾಟಕ ಮಾಡಲಾಯಿತು. ಈಗ, ಬರಗಾಲ ಬಂದಿದ್ದರೂ ಜಲಾಶಯಗಳು ಒಣಗುತ್ತಿದ್ದರೂ ಸಿದ್ದರಾಮಯ್ಯ ಅವರ ಸರ್ಕಾರ ಕದ್ದು ಮುಚ್ಚಿ ಕಾವೇರಿ ನೀರನ್ನು ಬಿಟ್ಟಿತುʼʼ ಎಂದು ಬಿಜೆಪಿ ದೂರಿದೆ. 

ʼʼI.N.D.I ಮೈತ್ರಿಕೂಟ ಉಳಿಸಿಕೊಳ್ಳಲು ರಾಹುಲ್‌ ಗಾಂಧಿ ಅವರನ್ನು ಮೆಚ್ಚಿಸಲು ಕನ್ನಡಿಗರ ಪರ ಸಮರ್ಥವಾಗಿ ವಾದ ಮಂಡಿಸದೆ ಸೋಲು ಒಪ್ಪಿಕೊಂಡಿತು. ಒಮ್ಮೆಯೂ ಸಿದ್ದರಾಮಯ್ಯ ಅವರ ಸರ್ಕಾರ ತಮಿಳುನಾಡಿನೊಂದಿಗೆ ಕೂತು ನೀರಿನ ಅಭಾವ ಕುರಿತು ಅರ್ಥ‌ ಮಾಡಿಸಲಿಲ್ಲʼʼಎಂದು ಬಿಜೆಪಿ ಟ್ವೀಟ್‌ ಮಾಡಿದೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News