ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರಕಾರ ವಿಫಲ: ಎಚ್.ಡಿ.ದೇವೇಗೌಡ

Update: 2024-03-05 14:31 GMT

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಟೀಕಿಸಿದ್ದಾರೆ.

ಮಂಗಳವಾರ ನಗರದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಕಡೆ ಗ್ಯಾರಂಟಿ ಕೊಟ್ಟಿದ್ದೇವೆ, ಸಾಧನೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡು ಓಡಾಡುತ್ತಿದ್ದಾರೆ. ರಾಜ್ಯದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸಿದ್ದರಾಮಯ್ಯ ಸಾಧನೆಯ ಕಿರುನೋಟ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕಾವೇರಿ ನೀರಿಗಾಗಿ ಹೋರಾಟ ನಡೆಸಿ ಹೇಮಾವತಿ, ಕಬಿನಿ, ಹಾರಂಗಿ ಅಣೆಕಟ್ಟು ಕಟ್ಟಿಸಿದವನು ನಿಮ್ಮ ಮುಂದೆ ಕೂತಿದ್ದೇನೆ. ಹೇಮಾವತಿಯಲ್ಲಿ ನೀರಿದೆ. ಅಲ್ಲಿನ ಹಳ್ಳಿಗಳಿಗೂ ಆ ನೀರು ಕೊಡಿ, ಬೆಂಗಳೂರಿಗೂ ನೀರು ಕೊಡಿ. ಕೆ.ಆರ್.ಎಸ್ ನಲ್ಲಿ ನೀರಿನ ಪ್ರಮಾನ 90 ಅಡಿಗೆ ಬಂದಿದೆ. ಹೇಮಾವತಿಯಲ್ಲಿ 23 ಟಿಎಂಸಿ ನೀರಿದೆ. ಜನರಿಗೆ ಕೊಡಲು ನಿಮಗೆ ಸಮಸ್ಯೆ ಏನು? ಜನರು ನೀರಿಗಾಗಿ ಕಣ್ಣೀರು ಹಾಕುತ್ತಿದ್ದಾರೆ ಎಂದು ಅವರು ಹೇಳಿದರು.

ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದೆ. ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮಾ.7ರ ಒಳಗೆ ನೋಂದಣಿ ಮಾಡಿಕೊಳ್ಳದ ಟ್ಯಾಂಕರ್ ಗಳನ್ನು ವಶಕ್ಕೆ ಪಡೆಯುತ್ತೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಒಂದು ಟ್ಯಾಂಕರ್ ನೀರಿಗೆ 2500 ರೂ.ಗಳಿಂದ 3 ಸಾವಿರ ರೂ.ಕೊಡಬೇಕು ಎಂದು ದೇವೇಗೌಡ ತಿಳಿಸಿದರು.

10 ತಿಂಗಳಲ್ಲಿ ನೀವು ಎಷ್ಟು ಕಡೆ ಪ್ರವಾಸ ಮಾಡಿದ್ದೀರಾ? 20 ದಿನ ಅಧಿವೇಶನ, ಸಭೆ, ಮಂತ್ರಿಗಳ ಮನೆ ಊಟಕ್ಕೆ 4 ದಿನ ಕಳೆದಿರಿ. ಬಾಕಿ ದಿನ ಏನು ಮಾಡಿದಿರಿ ನೀವು? ಗ್ಯಾರಂಟಿ ಯೋಜನೆ ಉಸ್ತುವಾರಿಗೆ ಮಾಜಿ ಮಂತ್ರಿಗಳ ನೇತೃತ್ವದಲ್ಲಿ ಸಮಿತಿ ಮಾಡಿದ್ದೀರಿ. 95 ಜನರಿಗೆ ಕ್ಯಾಬಿನೆಟ್ ದರ್ಜೆ ಆಹಾ ಎಂತಹ ಆಡಳಿತ? ಎಂದು ದೇವೇಗೌಡ ಕಿಡಿಕಾರಿದರು.

ವೃಷಭಾವತಿ ನೀರನ್ನು ನೆಲಮಂಗಲಕ್ಕೆ ಎತ್ತುತ್ತೇವೆ ಅಂತಾರೆ. ಮೂರು ತಿಂಗಳ ಹಿಂದೆ ಹೇಮಾವತಿ ನೀರು ನೆಲಮಂಗಲಕ್ಕೆ ತರುತ್ತೇನೆ ಅಂದರು. ಸಮಯಕ್ಕೆ ಸಂದರ್ಭಕ್ಕೆ ಅನುಸಾರವಾಗಿ ಹೇಳಿಕೆ ನೀಡುವ ನಿಮ್ಮನ್ನು ಜನ ನಂಬುತ್ತಾರೆಯೇ? ಈ ನಾಲಿಗೆಯಲ್ಲಿ ಯಾವ ಯಾವ ಸಮಯಕ್ಕೆ ಏನೇನು ಹೇಳ್ತೀರಾ? ಎಂದು ಮುಖ್ಯಮಂತ್ರಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News