ನಿವೃತ್ತ ಅಧಿಕಾರಿ, ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಲು ರಾಜ್ಯ ಸರಕಾರ ಆದೇಶ

Update: 2024-01-23 14:24 GMT

ಬೆಂಗಳೂರು: ರಾಜ್ಯ ಸರಕಾರದ ಸಚಿವಾಲಯ ಮತ್ತು ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಅಧಿಕಾರಿಗಳು ಹಾಗೂ ನೌಕರರನ್ನು ತಕ್ಷಣ ಸೇವೆಯಿಂದ ಬಿಡುಗಡೆಗೊಳಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಸರಕಾರದ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್ ಆದೇಶ ಹೊರಡಿಸಿದ್ದಾರೆ. ನಿವೃತ್ತ ಅಧಿಕಾರಿ ಹಾಗೂ ನೌಕರರಿಂದ ತೆರವಾಗುವ ಹುದ್ದೆಗಳಿಗೆ ಹಾಲಿ ಸರಕಾರಿ ಅಧಿಕಾರಿಗಳು ಹಾಗೂ ನೌಕರರನ್ನೆ ನಿಯೋಜಿಸುವಂತೆ ಸೂಚಿಸಲಾಗಿದೆ.

ಪ್ರಮುಖವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ಮತ್ತು ಸಚಿವಾಲಯದಲ್ಲಿ ಅನಗತ್ಯವಾದ ಹುದ್ದೆಗಳನ್ನು ಸೃಷ್ಠಿಸಿ, ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿರುವ ಅಧಿಕಾರಿ ಹಾಗೂ ನೌಕರರನ್ನು ಸಮಾಲೋಚಕರು, ವಿಶೇಷ ಸಂಪನ್ಮೂಲ ವ್ಯಕ್ತಿಗಳೆಂದು ನೇಮಿಸಿಕೊಳ್ಳಲಾಗಿದೆ.

ಇವರಿಗೆ ಸರಕಾರದಿಂದಲೆ ವೇತನ, ವಾಹನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಕಾರದ ಬೊಕ್ಕಸಕ್ಕೆ ಇದು ಹೆಚ್ಚುವರಿ ಹೊರೆ ಆಗುತ್ತಿದೆ. ಆದುದರಿಂದ, ತಕ್ಷಣವೇ, ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿರುವವರನ್ನು ಬಿಡುಗಡೆ ಮಾಡಿ, ಆ ಹುದ್ದೆಗಳಿ ಹಾಲಿ ಸರಕಾರಿ ಅಧಿಕಾರಿ, ನೌಕರರನ್ನು ನಿಯೋಜನೆ ಮಾಡುವಂತೆ ಮುಖ್ಯಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಅದರಂತೆ, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಸರಕಾರದ ಸಚಿವಾಲಯ ಮತ್ತು ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಅಧಿಕಾರಿ ಮತ್ತು ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News