ಸೌಜನ್ಯಳಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ: ಒಡನಾಡಿ ಸ್ಟ್ಯಾನ್ಲಿ

Update: 2023-07-17 14:17 GMT

ಒಡ ನಾಡಿ ಸ್ಟ್ಯಾನ್ಲಿ- ಒಳ ಚಿತ್ರದಲ್ಲಿ

ಮೈಸೂರು, ಜು.17: ''ಸೌಜನ್ಯಳ ಕುಟುಂಬ ಇಂತವರಿಂದ ನಮ್ಮ ಮಗಳ ಕೊಲೆಯಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದರೂ ಪೊಲಿಸರು ತನಿಖೆ ನಡೆಸಲಿಲ್ಲ, ಪ್ರಕರಣವನ್ನು ಕೆಲವರು ಸಮಾಧಿ ಕಟ್ಟುವ ಕೆಲಸವನ್ನು ಮಾಡಿದ್ದಾರೆ. ಈ ಮಗುವಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ'' ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹೇಳಿದ್ದಾರೆ.

ಸೋಮವಾರ ನಗರದ ಮೆಟ್ರೊಪೋಲ್ ವೃತ್ತದಲ್ಲಿರುವ ನಂಜರಾಜ ಬಹದ್ದೂರ್ ಛತ್ರದ ಬಳಿ ಸೌಜನ್ಯ ಪ್ರಕರಣವನ್ನು ಎಸ್‌ಐಟಿಗೆ ನೀಡಬೇಕು ಹಾಗೂ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಈ ಪ್ರಕರಣದ ಮರು ತನಿಖೆಯಾಗಬೇಕು, ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಬೇಕು, ಜೊತೆಗೆ ಪೊಲೀಸರು, ವೈದ್ಯರಿಗೂ ಶಿಕ್ಷೆಯಾಗುವವರೆಗೆ ವಿರಮಿಸುವುದಿಲ್ಲ. ಸೌಜನ್ಯ ಈ ದೇಶದ ಮಗಳು'' ಎಂದು ಹೇಳಿದರು. 

''ನಿಜವಾಗಲೂ ನಿಮಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಸಮಾಜದಲ್ಲಿ ಎಲ್ಲರಿಗೂ ಒಳಿತಾಗಬೇಕು ಎಂದರೆ ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದರೆ ನೀವು ಸೌಜನ್ಯಳ ಸಾವಿನ ಹೋರಾಟದ ಮುಂಚೂಣಿಗೆ ಬನ್ನಿ'' ಎಂದು ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆಯವರನ್ನು ಒತ್ತಾಯಿಸಿದರು.   

''ಸೌಜನ್ಯಳ ಕೊಲೆಯಗಿ 11 ವರ್ಷ ಕಳೆದರೂ ತಪ್ಪಿತಸ್ಥರು ಯಾರು ಎಂದು ಕಂಡುಹಿಡಿಯುವಲ್ಲಿ ನಮ್ಮ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಸೌಜನ್ಯಳ ಕುಟುಂಬ ಮಗಳ ಸಾವಿಗಾಗಿ ಪರಿತಪಿಸುತ್ತಿದೆ. ನಿಜವಾಗಲೂ ನೀವು ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಸೌಜನ್ಯಳ ತಂದೆ, ತಾಯಿ ಸ್ಥಾನದಲ್ಲಿ ನಿಂತು ರಾಜ್ಯಸಭಾ ಸದಸ್ಯರಾದ ನೀವು ಅವಳ ಸಾವನ್ನು ಪ್ರಶ್ನಿಸಿ. ನಮ್ಮ ಹೋರಾಟ ಯಾರ ಪರವೂ ಅಲ್ಲ, ವಿರುದ್ಧವೂ ಅಲ್ಲ, ಒಬ್ಬ ಅನ್ಯಾಯಕ್ಕೊಳಗಾದ ಹೆಣ್ಣು ಮಗಳ ಪರ'' ಎಂದು ಸ್ಪಷ್ಟಪಡಿಸಿದರು. 

'ಅಧರ್ಮದ ದಾರಿ ಹಿಡಿದವರು, ಸಂವಿಧಾನದ ವಿರುದ್ಧ ನಡೆಯುತ್ತಿರುವ ಜನ ಸೌಜನ್ಯಳಿಗೆ ಗೋರಿ ಕಟ್ಟಿದ್ದಾರೆ. ಹತ್ತಾರು ಜನರಿಗೆ ವಿದ್ಯೆ ನೀಡಿದ ಮೇಸ್ಟ್ರ ಮಗ ಸಂತೋಷ್ ರಾವ್ ಜೈಲು ಅನುಭವಿಸಿ ಪೊಲೀಸರು ಅವನ ಮರ್ಮಾಂಗಕ್ಕೆ ಮತ್ತು ಕೈ ಬೆರಳಿಗೆ ಸೂಜಿ ಚುಚ್ಚು ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ಹಿಂಸೆ ಕೊಟ್ಟಿದ್ದಾರೆ. ಆ ಎರಡು ಕಟುಂಬ ನ್ಯಾಯಕ್ಕಾಗಿ ಊರುರು ಸುತ್ತುತ್ತಿದ್ದಾರೆ'' ಎಂದು ಹೇಳಿದರು.

''ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವೀರೇಂದ್ರ ಹೆಗ್ಗಡೆ ಅವರು ಪತ್ರ ಬರೆದಿದ್ದಾರೆ ಎಂದು ಅವರ ಬಳಿಗೆ ಹೋಗುವುದಾದರೆ ಜನ ಕ್ಷಮಿಸುವುದಿಲ್ಲ. ನೀವು ಮತ್ತು ಗೃಹಸಚಿವರು ಮೊದಲು ಸೌಜನ್ಯ ಮತ್ತು ಸಂತೋಷ್ ರಾವ್ ಮನೆಗಳಿಗೆ ಭೇಟಿ ನೀಡಿ ಅವರ ಪರಿಸ್ಥಿತಿಯನ್ನು ನೋಡಿ, ನಿಮ್ಮಿಂದ ಖಂಡಿತ ನ್ಯಾಯಸಿಗುತ್ತದೆ ಎಂಬ ಭರವಸೆ ಇದೆ'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News