ವಿದ್ಯಾರ್ಥಿಗಳು ಓದುವುದಕ್ಕಷ್ಟೆ ಸೀಮಿತವಾಗದೆ ಸಾಹಿತ್ಯಾಸಕ್ತಿ ಮತ್ತು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು: ಸುರೇಶ ಬಿ. ಇಟ್ನಾಳ ಸಲಹೆ

Update: 2023-08-11 16:36 GMT

ದಾವಣಗೆರೆ: ವಿದ್ಯಾರ್ಥಿಗಳು ಓದುವುದಕ್ಕಷ್ಟೆ ಸೀಮಿತವಾಗದೆ ಸಾಹಿತ್ಯಾಸಕ್ತಿ ಮತ್ತು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು. ವೃತ್ತಿ ಕೌಶಲ್ಯಗಳನ್ನು ರೂಢಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಬಿ. ಇಟ್ನಾಳ ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ನಾತಕೋತ್ತರ ವಿದ್ಯಾರ್ಥಿಕೂಟ ಶಿವಗಂಗೋತ್ರಿ ಕ್ರೀಡೋತ್ಸವ-2023 ಅಂತರ ವಿಭಾಗಗಳ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ದೇಶದಲ್ಲಿ ಒಂದೆಡೆ ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದರೆ, ಮತ್ತೊಂದೆಡೆ ಹೊಸ ಮಾದರಿಯ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಕರ್ನಾಟಕವು ಹೊಸ ಉದ್ಯಮಶೀಲಗಳ ತಾಣವಾಗಿ ಗುರುತಿಸಿಕೊಳ್ಳುತ್ತಿರುವುದು ವಿಪರ್ಯಾಸ. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿದ್ದರೂ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.

ಈ ಹಿಂದೆ ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಸ್ವಾತಂತ್ರೊ್ಯೀತ್ಸವದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಬಿಟ್ಟು ತೊಲಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸದ್ಯದಲ್ಲಿಯೇ ‘ನನ್ನ ಮಣ್ಣು, ನನ್ನ ದೇಶ’ (ಮೇರಾ ಮಿಟ್ಟಿ ಮೇರಾ ದೇಶ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿಶ್ವವಿದ್ಯಾನಿಲಯದ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಊರಿನ ಮಣ್ಣು ಸಂಗ್ರಹಿಸಿ, ದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಈ ಮಹತ್ವಪೂರ್ಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೆಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದರು.

ಕ್ರೀಡಾಕೂಟವನ್ನು ವೀಕ್ಷಿಸಿದರೆ ಹಳೆಯ ದಿನಗಳು ಮರುಕಳಿಸುತ್ತವೆ. ಸೋಲು-ಗೆಲುವು ಸಾಮಾನ್ಯವಾದುದು. ಆದರೆ ವಿದ್ಯಾರ್ಥಿ ಜೀವನದಲ್ಲಿ ನಡೆಯುವ ಇಂಥ ಆಟ, ಪಾಠ, ಓಡಾಟಗಳನ್ನು ಜೀವನದಲ್ಲಿ ಮತ್ತೆಂದೂ ಸಿಗುವುದಿಲ್ಲ. ಸಿಕ್ಕಿರುವ ಅವಕಾಶವನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಂಡು ಸಂಭ್ರಮಿಸಬೇಕು. ಹಾಗೆಯೇ ಭವಿಷ್ಯದ ¨ಗ್ಗೆಯೂ ಚಿಂತನೆ ಮಾಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅವರು ತರಗತಿಯಲ್ಲಿ ಕಲಿಯುವ ಪಾಠ ಜ್ಞಾನಾರ್ಜನೆಯನ್ನು ಬೆಳೆಸಿದರೆ, ಕ್ರೀಡೆಗಳು ದೈಹಿಕ ಸಬಲತೆಯನ್ನು ಬೆಳೆಸುತ್ತವೆ. ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನಾಸಕ್ತಿಯ ವಾತಾವರಣವಿದ್ದರೆ, ಕ್ರೀಡಾಂಗಣದಲ್ಲಿ ಪರಸ್ಪರ ಭಾವನಾತ್ಮಕ ಸಂಬಂಧಗಳು ವೃದ್ಧಿಗೊಂಡು ಆತ್ಮೀಯತೆ ಸ್ನೇಹ ಸಂಬಂಧಗಳನ್ನು ವೃದ್ಧಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಕ್ರೀಡೋತ್ಸವವು ವಿಶ್ವವಿದ್ಯಾನಿಲಯದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ ಎಂದು ನುಡಿದರು.

ಜ್ಞಾನಾರ್ಜನೆಗೆ ದೈಹಿಕ ಆರೋಗ್ಯವೂ ಮುಖ್ಯ. ವಿದ್ಯಾರ್ಥಿಗಳು ಉತ್ತಮ ಭವಿಷ್ಯಕ್ಕಾಗಿ, ಸದೃಢ ದೇಶಕ್ಕಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ, ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಜಿಮ್ಖಾನಾ ವತಿಯಿಂದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷವೂ ಉತ್ಸವಗಳು ನಡೆಯಲಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಕುಲಸಚಿವೆ ಸರೋಜ ಬಿ.ಬಿ., ಪಿ.ಜಿ.ಜಿಮ್ಖಾನಾ ಅಧ್ಯಕ್ಷ ಹಾಗೂ ಹಣಕಾಸು ಅಧಿಕಾರಿ ಪ್ರೊ.ಆರ್. ಶಶಿಧರ ಉಪಸ್ಥಿತರಿದ್ದರು. ಜಿಮ್ಖಾನಾ ಉಪಾಧ್ಯಕ್ಷ ಡಾ.ಅಶೋಕಕುಮಾರ ಪಾಳೇದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ಡಾ.ಶಾರದಾ ಕಳ್ಳಿಮನಿ ವಂದಿಸಿದರು. ಡಾ.ಭೀಮಾಶಂಕರ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕ್ರೀಡಾಪಟುಗಳಿಂದ ಪಥ ಸಂಚಲನ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News