ದೆಹಲಿ ಸಭೆ | 5 ʼಗ್ಯಾರಂಟಿʼಗಳ ಯಶಸ್ಸು ಲೋಕಸಭಾ ಚುನಾವಣೆಗೆ ಭದ್ರ ಬುನಾದಿ ಆಗಬೇಕು: ರಾಹುಲ್ ಗಾಂಧಿ

Update: 2023-08-02 18:18 GMT

ಬೆಂಗಳೂರು, ಆ.2: ಸರಕಾರ ರಚನೆಯಾಗಿ ಎರಡು ತಿಂಗಳಲ್ಲೆ ಗ್ಯಾರಂಟಿ ಯೋಜನೆಗಳು ಜಾರಿ ಆಗಿರುವುದು, ಪ್ರತಿದಿನ ಈ ಯೋಜನೆಗಳ ಲಾಭ ಕರ್ನಾಟಕದ ಮಧ್ಯಮ ವರ್ಗ ಮತ್ತು ಬಡವರಿಗೆ ತಲುಪುತ್ತಿದೆ. ಈ ಗ್ಯಾರಂಟಿಗಳು ಪ್ರತಿಯೊಬ್ಬ ಫಲಾನುಭವಿಗೂ ಕಡ್ಡಾಯವಾಗಿ ತಲುಪುವಂತೆ ಆಡಳಿತ ಯಂತ್ರವನ್ನು ಸಮರ್ಪಕವಾಗಿ ಬಳಸಬೇಕು ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.

ಹೊಸದಿಲ್ಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಪಕ್ಷದ ವರಿಷ್ಠರು ನಡೆಸುತ್ತಿರುವ ಸಭೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ, ರಾಜ್ಯ ಸರಕಾರದ ಸಾಧನೆಯನ್ನು ಪ್ರಶಂಸಿಸಿದರು.

ಬೇರೆ ಬೇರೆ ರಾಜ್ಯ ಸರಕಾರಗಳು ಕರ್ನಾಟಕದ ಕಡೆಗೆ ನೋಡುತ್ತಿವೆ. ಸಾಲದ ಹೊರೆ ಆಗದಂತೆ, ಇರುವ ಅವಕಾಶದಲ್ಲೆ ಐದು ಗ್ಯಾರಂಟಿಗಳಿಗೆ ಹಣ ಹೊಂದಿಸುವ ಮೂಲಕ ಕರ್ನಾಟಕ ದೇಶಕ್ಕೆ ಒಂದು ಆರ್ಥಿಕ ಮಾದರಿಯನ್ನು ರೂಪಿಸಿ ಕೊಟ್ಟಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು. 

ಎರಡು ತಿಂಗಳುಗಳಲ್ಲೆ ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗದ ಜನರಿಗೆ ಸ್ಪಂದಿಸಿರುವುದರ ಬಗ್ಗೆ ನಮಗೆ ವರದಿ ಬಂದಿದೆ. ಐದು ಗ್ಯಾರಂಟಿಗಳು ದೇಶದ ಆರ್ಥಿಕ ನೀತಿಯ ಗೇಮ್ ಚೇಂಜರ್ ಆಗುತ್ತವೆ. ಈ ಗ್ಯಾರಂಟಿ ಯೋಜನೆಗಳ ಯಶಸ್ಸು ಬರಲಿರುವ ಲೋಕಸಭಾ ಚುನಾವಣೆಗೆ ಭದ್ರ ಬುನಾದಿ ಆಗಬೇಕು ಎಂದು ಅವರು ತಿಳಿಸಿದರು. 

22ರಿಂದ 24 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲುವ ಅವಕಾಶಗಳಿವೆ. ಈ ಬಗ್ಗೆ ಗಮನ ಹರಿಸಿ. ಕರ್ನಾಟಕದ ಮೂಲಕವೆ ಬಿಜೆಪಿಯ ಅವನತಿ ಶುರುವಾಗಿದೆ ಎನ್ನುವ ನಿಮ್ಮ ಹೇಳಿಕೆಯನ್ನು ಗಮನಿಸಿದೆ. ಇದು ಸತ್ಯವಾದ ನುಡಿ ಎಂದು ಸಿದ್ದರಾಮಯ್ಯ ಬಗ್ಗೆ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ನಡೆದ ಇಂಡಿಯಾ(ವಿರೋಧ ಪಕ್ಷಗಳ ನಾಯಕರ ಸಭೆ) ಅತ್ಯಂತ ಯಶಸ್ವಿಯಾಗಿದೆ. ಹೀಗಾಗಿ ರಾಷ್ಟ್ರ ಮಟ್ಟದಲ್ಲಿ ಬಹಳ ದೊಡ್ಡ ಬದಲಾವಣೆಗೆ ಕರ್ನಾಟಕ ದೊಡ್ಡ ಮಟ್ಟದಲ್ಲೆ ಸಹಕಾರ ಮಾಡುತ್ತಿದೆ. ನಿಮ್ಮ ಅವಧಿಯಲ್ಲಿ ಆಗಿರುವ ಐದು ಗ್ಯಾರಂಟಿಗಳ ಯಶಸ್ಸಿನ ಪ್ರತಿಫಲ ಲೋಕಸಭಾ ಚುನಾವಣೆಯಲ್ಲಿ ಪ್ರತಿಫಲಿಸಬೇಕು ಎಂದು ಅವರು ಹೇಳಿದರು. 

ಲೋಕಸಭಾ ಚುನಾವಣೆಗೆ ಉತ್ತಮ ಅಭ್ಯರ್ಥಿಗಳನ್ನು ಹೆಸರಿಸಿ. ಸೈದ್ಧಾಂತಿಕವಾಗಿ ಮತ್ತು ಆರ್ಥಿಕವಾಗಿ ಸರಕಾರವನ್ನು ಅಚ್ಚುಕಟ್ಟಾಗಿ ಮುನ್ನಡೆಸಿ. ಇಡಿ ಪಕ್ಷ ನಿಮ್ಮ ಜತೆಗಿದೆ. ಐದು ಗ್ಯಾರಂಟಿಗಳ ಸ್ವರೂಪದಲ್ಲೆ ಮುಂದಿನ ಲೋಕಸಭಾ ಚುನಾವಣೆಗೆ ಇಡಿ ದೇಶದ ಜನರಿಗೆ ಅನುಕೂಲ ಆಗುವ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಕೊಡಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದೇವೆ. ಇದಕ್ಕೆ ಪೂರಕವಾಗಿ ನಿಮ್ಮ ಅನುಭವ ಮತ್ತು ಸಲಹೆಗಳನ್ನು ನಮಗೆ ನೀಡಿ ಎಂದು ರಾಹುಲ್ ಗಾಂಧಿ ಕೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News