'ಬೆಂಕಿಯ ಜೊತೆ ಆಟ ಬೇಡ' ಎಂಬ ಸುಪ್ರೀಂ ಹೇಳಿಕೆ ಕೇಂದ್ರ ಸರ್ಕಾರಕ್ಕೆ ಕೊಟ್ಟಿರುವ ಪರೋಕ್ಷ ಎಚ್ಚರಿಕೆ: ದಿನೇಶ್ ಗುಂಡೂರಾವ್

Update: 2023-11-11 08:30 GMT

ಬೆಂಗಳೂರು: ಬೆಂಕಿಯ ಜೊತೆ ಆಟ ಬೇಡ ಎಂಬ ಸುಪ್ರೀಂ ಅಭಿಪ್ರಾಯ ಕೇವಲ ರಾಜ್ಯಪಾಲರಿಗೆ ಕೊಟ್ಟ ಎಚ್ಚರಿಕೆಯಲ್ಲ. ಬದಲಿಗೆ ರಾಜ್ಯಪಾಲರ ಮೂಲಕ ಒಕ್ಕೂಟ ವ್ಯವಸ್ಥೆಯ ಆಶಯವನ್ನೇ ಹಾಳು ಮಾಡಲು ಹೊರಟಿರುವ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಕೊಟ್ಟಿರುವ ಎಚ್ಚರಿಕೆಯೂ ಹೌದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಪಂಜಾಬ್ ರಾಜ್ಯಪಾಲರ ನಡೆಯ ವಿರುದ್ಧ ಸುಪ್ರೀಂ ಕೋರ್ಟ್ ಅತ್ಯಂತ ಕಟುವಾದ ಭಾಷೆಯಲ್ಲಿ ಎಚ್ಚರಿಕೆ ನೀಡಿರುವ ಬಗ್ಗೆ ಟ್ವೀಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್, “ರಾಷ್ಟ್ರಪತಿಗಳ ಮೂಲಕ ರಾಜ್ಯಗಳಿಗೆ ನೇಮಕವಾಗುವ ರಾಜ್ಯಪಾಲರು ಸಾಂವಿಧಾನಿಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಬೇಕು. ವಿಪರ್ಯಾಸವೆಂದರೆ‌ BJPಯೇತರ ರಾಜ್ಯಗಳಲ್ಲಿ ರಾಜ್ಯಪಾಲರಾಗಿ‌ ನಿಯುಕ್ತರಾಗಿರುವ ಕೆಲವು ರಾಜ್ಯಪಾಲರು BJPಯ ಏಜೆಂಟ್‌ಗಳಾಗಿದ್ದಾರೆ. ಅಧಿವೇಶನದಲ್ಲಿ ಅಂಗೀಕಾರವಾದ ಮಸೂದೆಗಳನ್ನು‌ ಅನಗತ್ಯವಾಗಿ ತಡೆ ಹಿಡಿಯುವುದು, ಬಿಕ್ಕಟ್ಟು ಸೃಷ್ಟಿಸುವುದು ಕೆಲ ರಾಜ್ಯಪಾಲರ ಕಾರ್ಯವಿಧಾನವಾಗಿದೆ. ಇದು ಸಂವಿಧಾನಕ್ಕೆ ಎಸಗುವ ಅಪಚಾರ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರ ನಡೆಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಎಚ್ಚರಿಕೆ‌ ಗಂಭೀರವಾದ ವಿಚಾರ. ಪಂಜಾಬ್, ಕೇರಳ, ತಮಿಳುನಾಡು ರಾಜ್ಯಪಾಲರು ಕೇಂದ್ರದ ಮರ್ಜಿಗೆ ಬಿದ್ದು ಪಕ್ಷಪಾತವಾಗಿ ನಡೆದುಕೊಳ್ಳದೆ ಸಂವಿಧಾನದ ಘನತೆ ಎತ್ತಿ ಹಿಡಿದಿದ್ದರೆ ಸುಪ್ರೀಂ ಇಷ್ಟು ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿರಲಿಲ್ಲ. ಸುಪ್ರೀಂನ‌ ಎಚ್ಚರಿಕೆಯ ಹಿನ್ನೆಲೆಯಲ್ಲಿ ಅವರೆಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಈ ವಿಷಯದಲ್ಲಿ ನಮ್ಮ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ನಿಸ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರ ಸರಳ ಸಜ್ಜನಿಕೆ ನಡವಳಿಕೆಯಿಂದ ಎಲ್ಲರ ವಿಶ್ವಾಸ ಗಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News