ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ವ್ಯವಸ್ಥೆ: ಸಚಿವ ದಿನೇಶ್ ಗುಂಡೂರಾವ್

Update: 2024-02-02 13:50 GMT

ಬೆಂಗಳೂರು: ಹಂತ-ಹಂತವಾಗಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಶುಕ್ರವಾರ ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಟೆಲಿ ಐಸಿಯು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನುರಿತ ತಜ್ಞ ವೈದ್ಯರಿಂದ ನಮ್ಮ ಗ್ರಾಮೀಣ ಪ್ರದೇಶದ ಜನರಿಗೆ ಚಿಕಿತ್ಸೆ ದೊರೆಯುವಂತಾಗಬೇಕು. ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಾಗಿ ಹಳ್ಳಿಗಾಡಿನ ಜನರಿಗೆ ದೂರದ ಜಿಲ್ಲೆಗಳಿಗೆ ಬರುವುದು ಕಷ್ಟವಾಗುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿಯೇ ಸೂಪರ್ ಸ್ಪಾಷಾಲಿಟಿ ಕೇರ್ ನ್ನು ಒದಗಿಸುವ ನಿಟ್ಟಿನಲ್ಲಿ ಟೆಲಿಐಸಿಯೂ ವ್ಯವಸ್ಥೆ ಸಹಕಾರಿ ಎಂದರು.

ತಾಲೂಕು ಮಟ್ಟದಲ್ಲಿ ಐಸಿಯು ಕೇಂದ್ರಗಳನ್ನು ಸ್ಥಾಪಿಸಿ, ಇಲ್ಲಿಂದಲೇ ಅವುಗಳನ್ನು ಪರಿಶೀಲಿಸುವಂತಹ ತಂತ್ರಜ್ಞಾನಗಳ ಬಳಕೆ ಕಾರ್ಯಕ್ಕೆ ನಾವು ಒತ್ತು ನೀಡಿದ್ದೇವೆ. ತುರ್ತು ಪರಿಸ್ಥಿತಿಯಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಆರೋಗ್ಯ ಪರಿಶೀಲನೆ ಹಾಗೂ ಚಿಕಿತ್ಸಾ ಸಲಹೆಗಳನ್ನ ಟೆಲಿಐಸಿಯು ಮೂಲಕ ತಜ್ಞ ವೈದ್ಯರಿಂದ ಪಡೆಯಬಹುದಾಗಿದೆ ಎಂದು ಗುಂಡೂರಾವ್ ಹೇಳಿದರು.

ಈಗಾಗಲೇ ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಈ ವ್ಯವಸ್ಥೆಯನ್ನ ಜಾರಿಗೆ ತರಲಾಗಿದ್ದು, ಇದೀಗ ಬೆಂಗಳೂರಿನ ವಿಕ್ಟೋರಿಯಾ ಹಾಗೂ ಬಳ್ಳಾರಿ ಮೆಡಿಕಲ್ ಕಾಲೇಜುಗಳಲ್ಲಿ ಟೆಲಿ ಐಸಿಯು ಅನುಷ್ಠಾನಗೊಳಿಸಿದ್ದೇವೆ. ಒಟ್ಟು ನಾಲ್ಕು ಸರಕಾರಿ ವೈದ್ಯಕೀಯ ಸಂಸ್ಥೆಗಳನ್ನ ಹಬ್‍ಗಳಾಗಿ ರಚಿಸಲಾಗಿದ್ದು, ಇವುಗಳಿಗೆ 41 ತಾಲೂಕು ಆಸ್ಪತ್ರೆಗಳನ್ನ ಲಿಂಕ್ ಮಾಡಲಾಗಿದೆ. ಈ 41 ತಾಲೂಕು ಆಸ್ಪತ್ರೆಗಳಲ್ಲಿ 10 ಟೆಲಿ ಐಸಿಯು ಬೆಡ್‍ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಐ ತಂತ್ರಜ್ಞಾನಗಳ ಮೂಲಕ ತಜ್ಞ ವೈದ್ಯರ ಸಲಹೆಯೊಂದಿಗೆ ಸೂಪರ್ ಸ್ಪೆಷಾಲಿಟಿ ಕೇರ್ ರೋಗಿಗಳಿಗೆ ದೊರೆಯಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಬೆಂಗಳೂರು ಹಾಗೂ ಬಳ್ಳಾರಿ ಕ್ಲಸ್ಟರ್ ಗೆ ತಲಾ 9 ತಾಲೂಕು ಆಸ್ಪತ್ರೆಗಳನ್ನ ಜೋಡಿಸಲಾಗಿದ್ದು, ಹುಬ್ಬಳ್ಳಿ ಕಿಮ್ಸ್ ಗೆ 10 ಹಾಗೂ ಮೈಸೂರು ವೈದ್ಯಕೀಯ ಸಂಸ್ಥೆಗೆ 13 ತಾಲೂಕು ಆಸ್ಪತ್ರೆಗಳನ್ನ ಲಿಂಕ್ ಮಾಡಲಾಗಿದೆ. ಒಟ್ಟು 41 ತಾಲೂಕು ಆಸ್ಪತ್ರೆಗಳನ್ನ ಸ್ಪೋಕ್ ಕೇಂದ್ರಗಳನ್ನಾಗಿ ರಚಿಸಲಾಗಿದೆ. ಮುಂದಿನ ವರ್ಷ 60 ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News