ರಾಮ ಮಂದಿರ ಉದ್ಘಾಟನೆ: ಕರ್ನಾಟಕದಲ್ಲಿ ಸಾರ್ವಜನಿಕ ರಜೆ ಇಲ್ಲ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Update: 2024-01-21 14:06 GMT

ತುಮಕೂರು: ಜ.22ರಂದು ಅಯೋಧ್ಯೆ ರಾಮಮಂದಿರದಲ್ಲಿ ಮೂರ್ತಿ ʻಪ್ರಾಣ ಪ್ರತಿಷ್ಠಾಪನೆʻ ಸಮಾರಂಭ ನಡೆಯಲಿದ್ದು, ಕರ್ನಾಟಕದಲ್ಲಿ ರಜೆ ಘೋಷಣೆ ಮಾಡಬೇಕೆಂದು ಆಗ್ರಹಗಳ ವ್ಯಕ್ತವಾಗಿವೆ. ಆದರೆ ಕರ್ನಾಟಕದಲ್ಲಿ ರಜೆ ಘೋಷಣೆ ಮಾಡುವುದಿಲ್ಲ ಎಂದು ಸಿ.ಎಂ.ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ

ತುಮಕೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ʻನಾಳೆ ಮುಜರಾಯಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತೆ. ಆದರೆ,ಸರಕಾರಿ ರಜೆ ಇಲ್ಲ. ನಾಳೆ ಮುಜರಾಯಿ ದೇಗುಲಗಳಲ್ಲಿ ದಾಸೋಹ, ಪಾನಕ-ಫಲಹಾರ ವ್ಯವಸ್ಥೆ ಬಗ್ಗೆ ನನಗೆ ಮಾಹಿತಿ ಇಲ್ಲ. ನಾಳೆ ಮಹದೇವಪುರದಲ್ಲಿ ರಾಮನ ದೇವಸ್ಥಾನ ಉದ್ಘಾಟನೆ ಮಾಡುತ್ತಿದ್ದೇನೆ. ಆ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ದೇಗುಲ ಉದ್ಘಾಟಿಸುತ್ತೇನೆʻ ಎಂದು ಹೇಳಿದರು.

ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ದಿನ ರಾಜ್ಯದಲ್ಲಿ ರಜೆ ಘೋಷಣೆ ಮಾಡಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಆಗ್ರಹಿಸಿದ್ದಾರೆ. ಈ ಸಂಬಂಧ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಹಿಂದೂಪರ ಸಂಘಟನೆಗಳು, ಬೆಂಗಳೂರು ವಕೀಲರ ಸಂಘವು ಸಹ ರಜೆ ನೀಡುವಂತೆ ಮನವಿ ಮಾಡಿತ್ತು. ಆದರೆ, ಇದೀಗ ಅಂತಿಮವಾಗಿ ಸಿದ್ದರಾಮಯ್ಯನವರು ರಜೆ ಘೋಷಣೆ ಮಾಡುವುದಿಲ್ಲ ಎಂದು ಸರಕಾರದ ನಿಲುವು ಪ್ರಕಟಿಸಿದ್ದಾರೆ.

ಈ ಮೊದಲು ಮಧ್ಯಮಗಳಿಗೆ ಜೊತೆ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಹ ಪರೋಕ್ಷವಾಗಿ ರಜೆ ಘೋಷಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಈ ಸಂಬಂಧ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಕೆಲ ಸಚಿವರು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸ್ವಲ್ಪ ಸಮಯ ಚರ್ಚಿಸಿದ್ದರು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News