ರಾಜ್ಯಕ್ಕೆ ಆಗಿರುವ ಅನ್ಯಾಯ ಒಪ್ಪಿಕೊಂಡ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ : ಡಿಸಿಎಂ ಡಿ.ಕೆ. ಶಿವಕುಮಾರ್

Update: 2024-04-07 09:41 GMT

ಬೆಂಗಳೂರು :  "ಬರ ಪರಿಹಾರ ವಿಚಾರದಲ್ಲಿ ಇಷ್ಟು ದಿನ ರಾಜ್ಯ ಸರಕಾರದ ಮೇಲೆ ಆರೋಪ ಮಾಡುತ್ತಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗ ರಾಜ್ಯಕ್ಕೆ ಆಗಿರುವ ಅನ್ಯಾಯ ಒಪ್ಪಿಕೊಂಡಿದ್ದು, ಅವರಿಗೆ ಧನ್ಯವಾದಗಳು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಅಪಾರ್ಟ್‌ ಮೆಂಟ್ ನಿವಾಸಿಗಳ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು 

ಬರ ಪರಿಹಾರ ವಿಳಂಬಕ್ಕೆ ಚುನಾವಣಾ ಆಯೋಗ ಕಾರಣ ಎಂಬ ಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಬರ ಪರಿಹಾರಕ್ಕೂ ಚುನಾವಣೆಗೂ ಏನು ಸಂಬಂಧ? ಈ ಹೇಳಿಕೆ ಮೂಲಕ ರಾಜ್ಯಕ್ಕೆ ಬರ ಪರಿಹಾರ ಬರುವುದು ವಿಳಂಬವಾಗಿದ್ದು, ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ರಾಜ್ಯ ಸರಕಾರದ ಮೇಲೆ ಆರೋಪ ಮಾಡುತ್ತಿದ್ದರು"ಎಂದರು.

ನಾವು ಬರ ಪರಿಹಾರ ನೀಡುವಂತೆ ಮನವಿ ನೀಡಿ ಎಷ್ಟು ತಿಂಗಳುಗಳಾಗಿವೆ? ನಾವು ಬರ ಪರಿಹಾರ ಮನವಿ ಕೊಟ್ಟ ಬಳಿಕ ನಾಲ್ಕು ತಿಂಗಳವರೆಗೂ ಯಾವುದೇ ಚುನಾವಣೆ ನೀತಿ ಸಂಹಿತೆ ಹಾಗೂ ಚುನಾವಣಾ ಆಯೋಗದ ನಿರ್ಬಂಧ ಇರಲಿಲ್ಲ. ಈಗ ಚುನಾವಣಾ ಆಯೋಗದ ನೆಪ ಹೇಳುತ್ತಿದ್ದಾರೆ ಎಂದು ಹೇಳಿದರು.

"ಕೇಂದ್ರ ಸರಕಾರದ ಅಕ್ಷಮ್ಯ ಅಪರಾಧದ ಬಗ್ಗೆ ಜನರಿಗೂ ಅರಿವಾಗಿದೆ. ಈ ಮೂಲಕ ಡಿ.ಕೆ. ಸುರೇಶ್ ಅವರ ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ಪಾಲಿನ ಹೋರಾಟ ಒಪ್ಪಿಕೊಂಡಿದ್ದಾರೆ. ಅವರಿಗೆ ಧನ್ಯವಾದಗಳು" ಎಂದರು.

ಅಧಿಕಾರ ಇದ್ದಾಗ ಕುಮಾರಸ್ವಾಮಿ ಯಾಕೆ ಮಾಡಲಿಲ್ಲ?:

ಮೇಕೆದಾಟು ಯೋಜನೆ ವಿಚಾರವಾಗಿ ಇಲ್ಲಿನ ಜನರ ಕಷ್ಟಕ್ಕೆ ಪರಿಹಾರ ನೀಡಿ ಧೈರ್ಯ ತುಂಬುವವರು ನಾವು. ಬೇರೆ ಅಭ್ಯರ್ಥಿಗಳು ನಮ್ಮಂತೆ ಜನರಿಗೆ ಅಭಯ ನೀಡುವುದಿಲ್ಲ. ಕುಮಾರಸ್ವಾಮಿ ಅವರು ಈಗ ಮೇಕೆದಾಟು, ಮಹದಾಯಿ ಯೋಜನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.

ಅಧಿಕಾರ ಇದ್ದಾಗ ಈ ವಿಚಾರದಲ್ಲಿ ಏನೂ ಮಾಡದವರು, ಈಗ ಏನು ಮಾಡುತ್ತಾರೆ. ನಾನು ಮೇಕೆದಾಟು ಪಾದಯಾತ್ರೆ ಮಾಡುವಾಗ ಅವರು ಕೊಟ್ಟಿರುವ ಹೇಳಿಕೆ ನೋಡಿ. ನಮ್ಮ ಪಾದಯಾತ್ರೆ ಸಂದರ್ಭದಲ್ಲಿ ಕಬಾಬ್ ತಿನ್ನೋಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದಿದ್ದ ಕುಮಾರಸ್ವಾಮಿ ಅವರು ಈಗ ಪಾದಯಾತ್ರೆ ಬಗ್ಗೆ ಮಾತಾಡುತ್ತಿದ್ದಾರೆ. ಮಂಡ್ಯಕ್ಕೆ ಬಂದ ನಂತರ ಅವರಿಗೆ ಬಿಸಿ ತಟ್ಟಿರುವಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

ನಾವು ಹೋರಾಟ ಮಾಡಿದ್ದು ರಾಜ್ಯದ ಜನತೆಗಾಗಿ. ರಾಜಕಾರಣದಲ್ಲಿ ಅದು ನಮ್ಮ ಬದ್ಧತೆ. ಅದನ್ನು ಅವರಿಂದ ಸಹಿಸಲು ಆಗಲಿಲ್ಲ. ಅವರು ಏನಾದರೂ ಮಾಡಿಕೊಳ್ಳಲಿ. ಕಾವೇರಿ ಜಲಾನಯನ ಪ್ರದೇಶದ ಜನರಿಗೆ, ಬೆಂಗಳೂರು ಜನರಿಗೆ ಕುಡಿಯುವ ನೀರು ಪೂರೈಸಲು ನಾನು ನೀರಾವರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News